ಪತ್ನಿ ಜತೆ ಅಫೇರ್! ಬೆಂಗಳೂರಿನ ಏರ್‌ಪೋರ್ಟ್‌ ಟರ್ಮಿನಲ್‌ನಲ್ಲಿಯೇ ಬರ್ಬರ ಹತ್ಯೆ

ಆಗಸ್ಟ್ 29, 2024 - 14:54
 0  20
ಪತ್ನಿ ಜತೆ ಅಫೇರ್! ಬೆಂಗಳೂರಿನ ಏರ್‌ಪೋರ್ಟ್‌ ಟರ್ಮಿನಲ್‌ನಲ್ಲಿಯೇ ಬರ್ಬರ ಹತ್ಯೆ
FOCUS KARNATAKA Bengaluru Airport

ಪತ್ನಿ ಜತೆ ಅಫೇರ್! ಬೆಂಗಳೂರಿನ ಏರ್‌ಪೋರ್ಟ್‌ ಟರ್ಮಿನಲ್‌ನಲ್ಲಿಯೇ ಬರ್ಬರ ಹತ್ಯೆ

 ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್- 1ರಲ್ಲಿ ಬುಧವಾರ ಟ್ರ್ಯಾಲಿ ಎಳೆಯುವ ಕೆಲಸಗಾರನನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹತ್ಯೆಯಾದ ಸಿಬ್ಬಂದಿಗೂ, ಆರೋಪಿಯ ಪತ್ನಿಗೂ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಆರೋಪಿ ಬೆಂಗಳೂರು ತೊರೆದು ಹೋಗಿದ್ದರೂ, ಹಳೆ ದ್ವೇಷದಿಂದ ಈ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ನೆತ್ತರು ಹರಿದಿದ್ದು, ಟ್ರ್ಯಾಲಿ ಎಳೆಯುವ ಕೆಲಸಗಾರನನ್ನು ಪರಿಚಯಸ್ಥನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿದ್ದಾನೆ.

ರಾಮಕೃಷ್ಣ (45) ಕೊಲೆಯಾದವರು. ಕೊಲೆ ಆರೋಪಿ ರಮೇಶ್‌ (45) ಎಂಬುವವನನ್ನು ಬಂಧಿಸಿರುವ ವಿಮಾನ ನಿಲ್ದಾಣ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ತಿಮ್ಮನಹಳ್ಳಿ ಗ್ರಾಮದ ರಮೇಶ್‌ ಕೂಡ ಈ ಹಿಂದೆ ಪತ್ನಿ ಜತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ರಮೇಶ್‌ ಪತ್ನಿ ಜತೆ ರಾಮಕೃಷ್ಣ ಅನೈತಿಕ ಸಂಬಂಧ ಹೊಂದಿದ್ದ ವಿಚಾರಕ್ಕೆ ಇಬ್ಬರ ನಡುವೆ ಹಲವು ಬಾರಿ ಜಗಳ ನಡೆದಿತ್ತು. 2011ರಿಂದಲೂ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ರಮೇಶ್‌ ದಾಂಪತ್ಯ ಕೂಡ ಹಳಸಿ ಪತಿ- ಪತ್ನಿ ಊರು ಸೇರಿದ್ದರು.

ಪ್ರಯಾಣಿಕರು ಬಿಟ್ಟುಹೋದ ಟ್ರ್ಯಾಲಿ ಕೊಂಡೊಯ್ಯಲು ಸಾಯಂಕಾಲ 6.30ರ ಸುಮಾರಿಗೆ ರಾಮಕೃಷ್ಣ ಹೊರಗಡೆ ಬರುತ್ತಲೇ ಚಾಕುವಿನಿಂದ ಏಕಾಏಕಿ ಹಲ್ಲೆ ನಡೆಸಿ ಕುತ್ತಿಗೆ ಭಾಗಕ್ಕೆ ಹಲವು ಬಾರಿ ಇರಿದಿದ್ದ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರಾಮಕೃಷ್ಣ ಅವರು ಸ್ಥಳದಲ್ಲಿಯೇ ಅಸುನೀಗಿದರು ಎಂದು ಪೊಲೀಸರು ಹೇಳಿದ್ದಾರೆ.

ಟರ್ಮಿನಲ್‌ ಹೊರದ್ವಾರದ ಬಳಿ ನಡೆದ ಭೀಕರ ಹತ್ಯೆ ಕಂಡು ಪ್ರಯಾಣಿಕರು ಹಾಗೂ ಸ್ಥಳದಲ್ಲಿದ್ದವರು ದಂಗಾದರು. ಸ್ಥಳದಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ತಕ್ಷಣವೇ ಅಲರ್ಟ್‌ ಆಗಿ ಆರೋಪಿ ರಮೇಶನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು. ಕೊಲೆಯ ನಂತರ ಏರ್‌ಪೋರ್ಟ್‌ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ರಾಮಕೃಷ್ಣ ಕೆಳಕ್ಕೆ ಬೀಳುತ್ತಲೇ ಅವರ ಪಕ್ಕ ಕುಳಿತ ರಮೇಶ್, ತನ್ನ ಪತ್ನಿ ಜತೆ ಸಂಬಂಧ ಹೊಂದಿದ್ದ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಹೇಳಿದ್ದ. ತಾನು ಪೊಲೀಸ್ ಠಾಣೆಗೆ ಹೋಗಿ ಶರಣಾಗುವುದಾಗಿ ತಿಳಿಸಿದ್ದ. ಆದರೆ ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ಆತನಿಗೆ ತಿಳಿಸಿದ್ದರು.

ರಾಮಕೃಷ್ಣ ಅವರ ಪತ್ನಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ ಸಜೀತ್‌ ತಿಳಿಸಿದರು

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow