ಪತ್ನಿಯನ್ನು ಗೃಹಬಂಧನದಲ್ಲಿಟ್ಟು ಕಿರುಕುಳ: ವೈದ್ಯ ಗಂಡ ಕೊಟ್ಟ ಚಿತ್ರಹಿಂಸೆ ಅಷ್ಟಿಷ್ಟಲ್ಲ!

ಚಿಕ್ಕಮಗಳೂರು:- ಕಾಲ ಕಳೆದಂತೆ ವಿದ್ಯಾವಂತರೇ ಅವಿದ್ಯಾವಂತರಂತೆ ವರ್ತನೆ ಮಾಡುತ್ತಿದ್ದಾರೆ. ಇಲ್ಲೊಬ್ಬ ಹೇಳೋದಕ್ಕೆ ಡಾಕ್ಟರ್. ಆದ್ರೆ ಆತ ಮಾಡಿರೋದು ನೀಚ ಕೆಲಸ.
ಚಿಕ್ಕಮಗಳೂರಿನಲ್ಲಿ ಪತ್ನಿಯನ್ನು ಗೃಹಬಂಧನದಲ್ಲಿಟ್ಟು ಪತಿ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಗೃಹಬಂಧನದಲ್ಲಿದ್ದ ಮಹಿಳೆಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ವೈದ್ಯನೊಬ್ಬ ತನ್ನ ಪತ್ನಿಯನ್ನು ಮನೆಯಲ್ಲೇ ಬಂಧಿಸಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಹಿಳೆ ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರಿಗೆ ಈ ಸುದ್ದಿ ತಿಳಿಯುತ್ತಿದ್ದಂತೆ ಮಹಿಳೆಯ ಪತಿ ರವಿಕುಮಾರ್ ನಾಪತ್ತೆಯಾಗಿದ್ದಾನೆ. ಮಹಿಳೆಯನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರವಿಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ಡಾ. ರವಿಕುಮಾರ್ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
22 ವರ್ಷಗಳ ಹಿಂದೆ ಡಾ.ರವಿಕುಮಾರ್, ವಿನುತಾರಾಣಿ ಅವರನ್ನು ವಿವಾಹವಾಗಿದ್ದ. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಬೇರೆಯಾಗಿದ್ದಾರೆ.
ವಿಚ್ಛೇದನ ನೀಡಿ ಕೂಡಾ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾನೆ ಎಂದು ವಿನುತಾ ರಾಣಿ ಅವರ ಮನೆಯವರು ಆರೋಪಿಸಿದ್ದಾರೆ. ಡಾ.ರವಿಕುಮಾರ್ ವಿನುತಾ ರಾಣಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದೆ. ಆಕೆಯ ಗಂಡ ಊಟದಲ್ಲಿ ಮತ್ತಿನ ಔಷಧ ನೀಡುತ್ತಿದ್ದ, ಜತೆಗೆ ಮನೆಯಲ್ಲೇ ಬಂಧಿಸಿ ಚಿತ್ರಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






