ಪ್ರಚೋದನಕಾರಿ ಹೇಳಿಕೆ: ಯತ್ನಾಳ್ʼಗೆ ಹೈಕೋರ್ಟ್ ಮಧ್ಯಂತರ ರಿಲೀಫ್: ಬಲವಂತದ ಕ್ರಮಕ್ಕೆ ತಡೆ
ವಿಜಯಪುರ: ಮುಸ್ಲಿಂ ಯುವತಿಯರನ್ನು ಮದುವೆಯಾದರೆ ಹಿಂದೂ ಯುವಕರಿಗೆ 5 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ ಪ್ರಕರಣದಲ್ಲಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಹೈಕೋರ್ಟ್ ಮಧ್ಯಂತರ ರಿಲೀಫ್ ದೊರಕಿದೆ.
ಯತ್ನಾಳ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕಲಬುರಗಿ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.
ಕೊಪ್ಪಳ ನಗರದಲ್ಲಿ ಕಳೆದ ತಿಂಗಳು ಯತ್ನಾಳ್ ನೀಡಿದ್ದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ವಿಜಯಪುರ, ಕಲಬುರಗಿ ಹಾಗೂ ಕೊಪ್ಪಳದಲ್ಲಿ ಮೂರು ದೂರುಗಳು ದಾಖಲಾಗಿದ್ದವು. ಬಳಿಕ ವಿಜಯಪುರ ಮತ್ತು ಕಲಬುರಗಿಯಲ್ಲಿ ದಾಖಲಾಗಿದ್ದ ದೂರುಗಳನ್ನು ಪೊಲೀಸ್ ಇಲಾಖೆ ಕೊಪ್ಪಳಕ್ಕೆ ವರ್ಗಾಯಿಸಿತ್ತು.
ಈ ದೂರುಗಳ ರದ್ದತಿ ಕೋರಿ ಯತ್ನಾಳ್ ಕಲಬುರಗಿ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಏಕಸದಸ್ಯ ಪೀಠ, ತನಿಖೆ ಮುಂದುವರಿಯಬಹುದು ಆದರೆ ಬಲವಂತದ ಕ್ರಮಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?