ಫುಡ್ ವೇಸ್ಟ್ ಮಾಡ್ತಿದ್ದೀರಾ!? ಹುಷಾರ್ ಜಾರಿ ಬರಲಿದೆ ನೂತನ ಕಾನೂನು!

ಫುಡ್ ವೇಸ್ಟ್ ಮಾಡ್ತಿದ್ದೀರಾ!? ಹಾಗಿದ್ರೆ ಈ ಸ್ಟೋರಿ ನೀವು ನೋಡಲೇಬೇಕು. ಎಸ್ ಆಹಾರ ವ್ಯರ್ಥ ಮಾಡಿದ್ರೆ ಇನ್ನೂ ಜಾರಿಗೆ ಬರುತ್ತಂತೆ ಹೊಸ ಕಾನೂನು ಇದರ ಬಗ್ಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಎಚ್ ಮುನಿಯಪ್ಪ ಸುಳಿವು ನೀಡಿದ್ದಾರೆ.
ಹೋಟೆಲ್‌ಗಳು ಮತ್ತು ಬ್ಯಾಂಕ್ವೆಟ್ ಹಾಲ್‌ಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಮುನಿಯಪ್ಪ ಹೇಳಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ವಿಶ್ವ ಆಹಾರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಹೋಟೆಲ್‌ಗಳು ಮತ್ತು ಮದುವೆ ಮಂಟಪಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಸರ್ಕಾರವು ಕರಡು ನಿಯಮ ರೂಪಿಸಲಿದೆ. ದೇಶದಲ್ಲಿ ವಾರ್ಷಿಕವಾಗಿ 90,000 ಕೋಟಿ ರೂ. ಮೌಲ್ಯದ ಆಹಾರ ವ್ಯರ್ಥವಾಗುತ್ತದೆ. ಆಹಾರವನ್ನು ವ್ಯರ್ಥ ಮಾಡದಂತೆ ಮಕ್ಕಳಿಗೆ ಕಲಿಸುವುದು ಮತ್ತು ಆಹಾರವನ್ನು ಸರಿಯಾಗಿ ಬಳಸಿಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಸುಮಾರು ಶೇ 70 ರಷ್ಟು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತವಾಗಿದೆ. ರಾಗಿಯ ಬಳಕೆಯನ್ನು ಹೆಚ್ಚಿಸಬೇಕು, ಇದು ಆರೋಗ್ಯ ಸುಧಾರಿಸಲು ಉತ್ತಮವಾಗಿದೆ. ರಾಗಿ ಉತ್ಪಾದನೆ ಕಡಿಮೆಯಾಗುತ್ತಿದ್ದು, ರೈತರು ರಾಗಿ, ಭತ್ತ ಮತ್ತಿತರ ಧಾನ್ಯಗಳನ್ನು ಬೆಳೆಯುವತ್ತ ಗಮನ ಹರಿಸಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ. ಪ್ರಸ್ತುತ, ಭಾರತವು ಮೂರು ವರ್ಷಗಳವರೆಗೆ ಸಾಕಾಗುವಷ್ಟು ಆಹಾರ ಧಾನ್ಯ ಸಂಗ್ರಹ ಹೊಂದಿದೆ. ಇತರ ದೇಶಗಳಿಗೆ ರಫ್ತು ಮಾಡುವಷ್ಟು ಪ್ರಬಲವಾಗಿದೆ ಎಂದು ಮುನಿಯಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರವು ‘ಅನ್ನ ಭಾಗ್ಯ’ ಯೋಜನೆಯನ್ನು ಜಾರಿಗೆ ತಂದಿದೆ. ಯಾರೇ ಆಗಲಿ, ನಾಗರಿಕರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






