ಬಿಕ್ಲ ಶಿವ ಕೊಲೆ ಪ್ರಕರಣ: ವಿಚಾರಣೆ ವೇಳೆಯೇ ಅರೆಸ್ಟ್ ಆಗ್ತಾರಾ ಮಾಜಿ ಸಚಿವ ಬೈರತಿ ಬಸವರಾಜ್!?

ಬೆಂಗಳೂರು : ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧವಾಗಿ ವಿಧಾನಸಭಾ ಸದಸ್ಯ ಬೈರತಿ ಬಸವರಾಜ್ ಅವರನ್ನು ಪೊಲೀಸರು ಶನಿವಾರ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಕುರಿತು ಪೊಲೀಸರು ಶಾಸಕರಿಗೆ ಈಗಾಗಲೇ ನೋಟಿಸ್ ನೀಡಿದ್ದು, ಎರಡು ದಿನಗಳ ಕಾಲ ಸಮಯ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು.
ಶಾಸಕರು ಇಂದು ನೇರವಾಗಿ ವಿಚಾರಣೆಗೆ ಹಾಜರಾಗಲಿದ್ದು, ಅವರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ‘ಜಗ್ಗ’ ಮತ್ತು ಇತರ ಆರೋಪಿಗಳೊಡನೆ ಹೊಂದಿದ್ದ ಸಂಪರ್ಕ ಕುರಿತು ಪ್ರಶ್ನೆಗಳಿಗೆ ಉತ್ತರ ನೀಡುವ ಸಾಧ್ಯತೆ ಇದೆ.
ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಪ್ರಕರಣ, ಮಾಜಿ ಸಚಿವ ಬೈರತಿ ಬಸವರಾಜ್ಗೆ ಸಂಕಷ್ಟತಂದೊಡ್ಡಿದೆ. ಇದರ ನಡುವೆ ತಮ್ಮ ವಿರುದ್ಧದ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಬಿಜೆಪಿ ಶಾಸಕನಿಗೆ ಹಿನ್ನಡೆಯಾಗಿದ್ದು, ಪೊಲೀಸರ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಇದರಿಂದ ಮಾಜಿ ಸಚಿವ ಬೈರತಿ ಬಸವರಾಜ್ ಅಡಕತ್ತರಿಗೆ ಸಿಲುಕಿದ್ದು, ಬಂಧನ ಭೀತಿಯಲ್ಲಿದ್ದಾರೆ.
ಶಾಸಕರ ವಿರುದ್ಧ ಹಲವು ಸಾಕ್ಷ್ಯ ಸಂಗ್ರಹಿಸುತ್ತಿರುವ ತನಿಖಾ ತಂಡ ಸಾಕಷ್ಟು ಬಲವಾದ ಮಾಹಿತಿಗಳನ್ನು ಸಂಗ್ರಹಿಸಿದೆ ಎನ್ನಲಾಗಿದೆ. ಕಾಂಕ್ರೀಟ್ ಎವಿಡೆನ್ಸ್ ಇದ್ದ ಕಾರಣದಿಂದಲೇ ಶಾಸಕರಿಗೆ ನೊಟಿಸ್ ನೀಡಲಾಗಿದ್ದು, ಕಳೆದೆರಡು ದಿನದಲ್ಲಿ ಮತ್ತಷ್ಟು ಮಾಹಿತಿ ಕಲೆ ಹಾಕಲಾಗಿದೆ.
ಶಾಸಕ ಬೈರತಿ ಬಸವರಾಜ್ ಗೆ ಕಂಟಕವಾದೀತೆ ಆ ಎರಡು ಅಂಶಗಳು?
ಕೊಲೆ ಬೆದರಿಕೆ ಪ್ರಕರಣ ಮತ್ತು ಬಿಕ್ಲು ಶಿವ ಕೊಲೆ ಆರೋಪಿಗಳೊಡನೆ ಶಾಸಕರು ನೇರ ಸಂಪರ್ಕ ಹೊಂದಿರುವುದೇ ದೊಡ್ಡ ಕಂಟಕವಾಗಲಿದೆ ಎಂದು ಹೇಳಲಾಗಿದೆ. ಕೊಲೆಯ ಎ 1 ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ಹಲವು ವರ್ಷಗಳಿಂದ ಶಾಸಕ ಬೈರತಿ ಬಸವರಾಜ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾನೆ. ಈಗಾಗಲೇ ಇವರಿಬ್ಬರು ಒಟ್ಟಾಗಿ ಹಲವು ಕಾರ್ಯಕ್ರಮಗಳು, ಖಾಸಗಿ ಪಾರ್ಟಿಗಳು ಮತ್ತಿತರ ಸಂದರ್ಭಗಳಲ್ಲಿ ಒಟ್ಟಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇಷ್ಟೇ ಅಲ್ಲದೇ , ಕೆಲವು ಪೊಲೀಸ್ ಠಾಣೆಗಳಲ್ಲಿ ಜಗ್ಗನ ಪರ ಮಾತನಾಡಿ ಕೆಲಸಗಳನ್ನ ಮಾಡಿಸಲು ಶಾಸಕರು ಅನುವು ಮಾಡಿಕೊಟ್ಟಿದ್ದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಅಲ್ಲದೇ ತಮ್ಮ ಕೆಲಸಗಳಿಗೂ ಜಗ್ಗನನ್ನ ಬಳಸಿಕೊಂಡಿರೋ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ಓರ್ವ ಮಾಜಿ ರೌಡಿಶೀಟರ್ ಜೊತೆ ಅಷ್ಟೊಂದು ಕ್ಲೋಸ್ ಕಾಂಟ್ಯಾಕ್ಟ್ ಇರುವುದು ತನಿಖಾ ತಂಡಕ್ಕೂ ಸಹ ಅಚ್ಚರಿ ಮೂಡಿಸಿದೆ.
ಈಗಾಗಲೇ ಶಾಸಕ ಹಾಗೂ ಮಾಜಿ ರೌಡಿ ಜಗ್ಗನ ಕಾಂಟ್ಯಾಕ್ಟ್ ಬಗ್ಗೆ ಮಾಹಿತಿ ಕೆದಕುತ್ತಿರುವ ಪೊಲೀಸರು, ಕಳೆದ ಹತ್ತು ವರ್ಷದ ಚರಿತ್ರೆಯನ್ನು ಬಗೆದು ತೆಗೆಯುತ್ತಿದ್ದಾರೆನ್ನಲಾಗಿದೆ. ಈ ವೇಳೆ ಶಾಸಕ ಬೈರತೀ ಬಸವರಾಜ್ ಗೂ ಜಗ್ಗನಿಗೂ ಸಂಪರ್ಕದ ಬಗ್ಗೆ ಕೆಲ ಮಹತ್ವದ ಮಾಹಿತಿ ಲಭ್ಯವಾಗಿದೆ. ಕಳೆದ ಆರು ತಿಂಗಳ ಇಬ್ಬರ ಚಲನವಲನದ ಮಾಹಿತಿ, ಮೊಬೈಲ್ ಕರೆಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಕೊಲೆ ಬೆದರಿಕೆ ಪ್ರಕರಣದಲ್ಲಿ ಹಾಗೂ ರೌಡಿಶೀಟರ್ ಕೊಲೆಯಲ್ಲಿ ಶಾಸಕರ ಕೈವಾಡಕ್ಕೆ ಇದೇ ಮೊದಲ ಸಾಕ್ಷ್ಯಾಧಾರವಾಗಿ ಮಾರ್ಪಟ್ಟಿದೆ.
ಫೆಬ್ರವರಿಯಲ್ಲಿ ನೇರವಾಗಿ ಶಾಸಕರ ವಿರುದ್ಧ ಕೊಲೆ ಬೆದರಿಕೆ ಆರೋಪ ಮಾಡಿದ್ದ ಬಿಕ್ಲು ಶಿವ, ಶಾಸಕರ ಕುಮ್ಮಕ್ಕಿನಿಂದ ಜಗ್ಗನ ಜೊತೆ ಸೇರಿಕೊಂಡು ಹಲವರು ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದ್ದ. ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರಿಗೂ ಪತ್ರ ಬರೆದು ಇದರ ನಕಲನ್ನು ಮುಖ್ಯಮಂತ್ರಿ ಕಚೇರಿಗೂ ಸಹ ಕಳಿಸಿದ್ದ. ಜಮೀನಿನ ವಿಚಾರಕ್ಕೆ ಪದೇ ಪದೇ ಕೊಲೆ ಬೆದರಿಕೆ ಎದುರಿಸುತ್ತಿರುವ ನನ್ನ ಜೀವಕ್ಕೆ ಏನಾದರು ಆದರೆ ಶಾಸಕರೇ ಹೊಣೆ ಎಂದು ದೂರು ನೀಡಿದ್ದ.
ಈಗ ಅದೇ ಜಗದೀಶ್ ಅಲಿಯಾಸ್ ಜಗ್ಗನ ಬಾಮೈದ ಆ್ಯಂಡ್ ಟೀಂ ಈ ಕೊಲೆಯನ್ನು ನಾವೇ ಮಾಡಿದ್ದೇವೆಂದು ಪೊಲೀಸರ ಮುಂದೆ ಶರಣಾಗಿದ್ದಾರೆ. ಮೇಲುನೋಟಕ್ಕೆ ಕೊಲೆ ಜಮೀನಿನ ವಿಷಯದಲ್ಲಿಯೇ ನಡೆದಿದೆಯೆಂಬುದು ಪೊಲೀಸರಿಗೆ ಸ್ಪಷ್ಟವಾಗಿದ್ದು, ಇದೇ ಆಯಾಮದಲ್ಲಿ ತನಿಖೆ ಮುಂದುವರೆಸಿದ್ದಾರೆ
ನಿಮ್ಮ ಪ್ರತಿಕ್ರಿಯೆ ಏನು?






