ಭಾರತಕ್ಕೆ ಮತ್ತೊಮ್ಮೆ ಪರಮಾಣು ಬೆದರಿಕೆ ಹಾಕಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ!
ಇಸ್ಲಾಮಾಬಾದ್: ಪಾಕಿಸ್ತಾನ ಮತ್ತೆ ಭಾರತ ವಿರೋಧಿ ಹೇಳಿಕೆಗಳಿಂದ ಸುದ್ದಿಯಾಗಿದೆ. ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ವಾಯುನೆಲೆಗಳು, ಯುದ್ಧ ವಿಮಾನಗಳು, ಉಗ್ರ ನೆಲೆಗಳನ್ನು ಕಳೆದುಕೊಂಡಿದ್ದರೂ, ಪಾಕಿಸ್ತಾನದ ನಾಯಕರು ಮತ್ತು ಸೇನಾ ಅಧಿಕಾರಿಗಳು “ನಾವೇ ಗೆದ್ದಿದ್ದೇವೆ” ಎಂಬ ಧೋರಣೆಯಲ್ಲಿದ್ದಾರೆ.
ಇದೀಗ ತಾಲಿಬಾನ್ ವಿರುದ್ಧದ ಸಂಘರ್ಷದಲ್ಲೂ ಪಾಕಿಸ್ತಾನ ಸೇನೆಗೆ ತೀವ್ರ ಹಿನ್ನಡೆ ಎದುರಾಗಿದೆ. ತಾಲಿಬಾನಿಗಳ ದಾಳಿಯಿಂದ ಅಪಾರ ನಷ್ಟ ಅನುಭವಿಸುತ್ತಿರುವ ಪಾಕಿಸ್ತಾನ ಈಗ ಹತಾಶೆಯಿಂದ ಭಾರತ ವಿರುದ್ಧ ಮತ್ತೊಮ್ಮೆ ಹೇಳಿಕೆ ನೀಡಲು ಪ್ರಾರಂಭಿಸಿದೆ.
ಪಾಕಿಸ್ತಾನ ಮಿಲಿಟರಿ ಅಕಾಡೆಮಿ (ಪಿಎಂಎ)ಯ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, ಭಾರತದ ಯಾವುದೇ ಬೆದರಿಕೆಗೆ ಪಾಕಿಸ್ತಾನ ಹೆದರುವುದಿಲ್ಲ, ಒತ್ತಡಕ್ಕೂ ಒಳಗಾಗುವುದಿಲ್ಲ. ಸಣ್ಣ ಪ್ರಚೋದನೆಗೂ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಎರಡು ರಾಷ್ಟ್ರಗಳ ನಡುವೆ ಏನಾದರೂ ಸಂಭವಿಸಿದರೆ ಅದಕ್ಕೆ ಭಾರತವೇ ಹೊಣೆಗಾರ. ಯುದ್ಧ ಮತ್ತೆ ಶುರುವಾದರೆ ಈ ಬಾರಿ ಪಾಕಿಸ್ತಾನ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ನೀಡಲಿದೆ ಎಂದು ಅಸಿಮ್ ಮುನೀರ್ ಹೇಳಿಕೆ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?