India vs Australia: ಗಿಲ್ ಪಡೆಗೆ ಮುಖಭಂಗ: ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು!
ಪರ್ತ್ ಮೈದಾನದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 7 ವಿಕೆಟ್ಗಳ ಅಂತರದಿಂದ ಗೆದ್ದು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನಿರೀಕ್ಷೆಯಂತೆಯೇ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು.
ಪರಿಣಾಮವಾಗಿ ಪಂದ್ಯವನ್ನು ತಲಾ 26 ಓವರ್ಗಳಿಗೆ ಇಳಿಸಲಾಯಿತು. ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಿದ ಭಾರತ 9 ವಿಕೆಟ್ಗಳ ನಷ್ಟಕ್ಕೆ 136 ರನ್ಗಳನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 3 ವಿಕೆಟ್ಗಳನ್ನು ಕಳೆದುಕೊಂಡು ಸುಲಭವಾಗಿ ಜಯ ಗಳಿಸಿತು.
ರೋಹಿತ್, ಕೊಹ್ಲಿ ನಿರಾಸೆ
ಈ ಪಂದ್ಯವು ಎರಡೂ ತಂಡಗಳಿಗೆ ಮಹತ್ವದ್ದಾಗಿತ್ತು. ಭಾರತ ಪರ್ತ್ ಮೈದಾನದಲ್ಲಿ ತನ್ನ ಮೊದಲ ಏಕದಿನ ಪಂದ್ಯವನ್ನು ಆಡುತ್ತಿದ್ದರೆ, ಆಸ್ಟ್ರೇಲಿಯಾ ಈ ಮೈದಾನದಲ್ಲಿ ಎಂದಿಗೂ ಗೆದ್ದಿರಲಿಲ್ಲ. ಆದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಬ್ಯಾಟಿಂಗ್ನಲ್ಲಿ ವಿಫಲರಾದರು. ಇತ್ತ ಆಸ್ಟ್ರೇಲಿಯಾದ ಯುವ ಆಟಗಾರರು ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ ಈ ಮೈದಾನದಲ್ಲಿ ಹಿಂದಿನ ಮೂರು ಏಕದಿನ ಪಂದ್ಯಗಳಲ್ಲಿ ಸೋತಿದ್ದ ಆಸ್ಟ್ರೇಲಿಯಾ ತನ್ನ ಮೊದಲ ಗೆಲುವನ್ನು ದಾಖಲಿಸಿತು.
ರಾಹುಲ್, ಅಕ್ಷರ್ ಪಟೇಲ್ ಹೋರಾಟ
ಮಳೆಯಿಂದಾಗಿ ಭಾರತ ಬ್ಯಾಟಿಂಗ್ ನಾಲ್ಕು ಬಾರಿ ನಿಲ್ಲಿಸಲಾಯಿತು. ಈ ಅಡ್ಡಿಪಡಿಗಳ ನಡುವೆಯೂ ಕೆಎಲ್ ರಾಹುಲ್ (38), ಅಕ್ಷರ್ ಪಟೇಲ್ (31), ಮತ್ತು ನಿತೀಶ್ ಕುಮಾರ್ ರೆಡ್ಡಿ (19 ನಾಟೌಟ್) ಭಾರತಕ್ಕೆ 100 ರನ್ಗಳ ಗಡಿ ದಾಟಿಸಲು ನೆರವಾದರು. ಆಸ್ಟ್ರೇಲಿಯಾ ಪರ ಮಿಚೆಲ್ ಓವನ್ ಮತ್ತು ಮ್ಯಾಥ್ಯೂ ಕುಹ್ನೆಮನ್ ತಲಾ ಎರಡು ವಿಕೆಟ್ಗಳನ್ನು ಪಡೆದರು.
ಆಸ್ಟ್ರೇಲಿಯಾಕ್ಕೆ ಸರಳ ಗುರಿ
ಡಕ್ವರ್ತ್-ಲೂಯಿಸ್ ವಿಧಾನದಿಂದ ಆಸ್ಟ್ರೇಲಿಯಾಕ್ಕೆ ಗುರಿ 131 ರನ್ಗಳಿಗೆ ಇಳಿಸಲಾಯಿತು. ಆರಂಭದಲ್ಲೇ ಟ್ರಾವಿಸ್ ಹೆಡ್ ಔಟಾದರೂ, ನಾಯಕ ಮಿಚೆಲ್ ಮಾರ್ಷ್ (46 ನಾಟೌಟ್) ಸತತ ಸಿಕ್ಸರ್ಗಳೊಂದಿಗೆ ಪಂದ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡರು. ಜೊತೆಗೆ ಜೋಶ್ ಫಿಲಿಪ್ (37) ಮತ್ತು ಮ್ಯಾಥ್ಯೂ ರೆನ್ಶಾ (21 ನಾಟೌಟ್) ಅವರ ಜೊತೆಯಾಟದೊಂದಿಗೆ ಆಸ್ಟ್ರೇಲಿಯಾ 21.1 ಓವರ್ಗಳಲ್ಲಿ ಗೆಲುವು ಸಾಧಿಸಿತು.
ಫಲಿತಾಂಶ:
ಭಾರತ : 26 ಓವರ್ಗಳಲ್ಲಿ 9 ವಿಕೆಟ್ಗೆ 136
ಆಸ್ಟ್ರೇಲಿಯಾ: 21.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131
ಫಲಿತಾಂಶ: ಆಸ್ಟ್ರೇಲಿಯಾ 7 ವಿಕೆಟ್ಗಳಿಂದ ಗೆದ್ದಿತು.
ನಿಮ್ಮ ಪ್ರತಿಕ್ರಿಯೆ ಏನು?