ಮಕ್ಕಳನ್ನು ಪಟಾಕಿಯಿಂದ ದೂರವಿಡಲು ಏನು ಮಾಡಬೇಕು? ಇಲ್ಲಿದೆ ನೋಡಿ ಟಿಪ್ಸ್
ಬೆಳಕಿನ ಹಬ್ಬ ದೀಪಾವಳಿ ಮಕ್ಕಳಿಗೆ ಅಪಾರ ಉತ್ಸಾಹ ನೀಡುವ ಹಬ್ಬ. ಹೊಸ ಬಟ್ಟೆ, ರಂಗೋಲಿ, ದೀಪಗಳು ಮತ್ತು, ಮುಖ್ಯವಾಗಿ ಪಟಾಕಿ ಸಿಡಿಸುವ ಉತ್ಸಾಹ ಎಲ್ಲರಲ್ಲೂ ಹೆಚ್ಚಿರುತ್ತದೆ. ಆದರೆ ವೈದ್ಯಕೀಯ ಮತ್ತು ಪರಿಸರ ತಜ್ಞರ ಅಭಿಪ್ರಾಯದಂತೆ, ಪಟಾಕಿಗಳ ಸದ್ದು ಮತ್ತು ಹೊಗೆ ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿ.
ಹೀಗಾಗಿ ಪೋಷಕರು ಮಕ್ಕಳನ್ನು ಪಟಾಕಿಯಿಂದ ದೂರವಿಡಲು ಪ್ರಯತ್ನಿಸುತ್ತಾರೆ. ಆದರೆ ಮಕ್ಕಳು ಪಟಾಕಿ ಸಿಡಿಸಲೇಬೇಕು ಎಂದು ಹಠ ಮಾಡುವುದು ಸಾಮಾನ್ಯ. ಇಂಥ ಸಂದರ್ಭದಲ್ಲೇ ಹಬ್ಬದ ಸಂಭ್ರಮವನ್ನು ಹಾಳುಮಾಡದೆ, ಮಕ್ಕಳನ್ನು ಸೃಜನಶೀಲ ಚಟುವಟಿಕೆಗಳ ಮೂಲಕ ಪಟಾಕಿಯಿಂದ ದೂರವಿಡಬಹುದಾಗಿದೆ.
ಮಕ್ಕಳಿಗೆ ನೀಡಬಹುದಾದ ಸೃಜನಶೀಲ ಬದಲಾವಣೆಗಳು:
-
ರಂಗೋಲಿ ಚಟುವಟಿಕೆ: ದೀಪಾವಳಿ ಹಬ್ಬದಲ್ಲಿ ರಂಗೋಲಿ ಹಾಕುವುದು ಒಂದು ಸಂಪ್ರದಾಯ. ಮಕ್ಕಳ ಕೈಯಿಂದಲೇ ರಂಗೋಲಿ ಹಾಕಲು ಪ್ರೋತ್ಸಾಹಿಸುವುದು ಅವರಲ್ಲಿ ಕಲಾತ್ಮಕತೆ ಹೆಚ್ಚಿಸಲಿದೆ.
-
ದೀಪ ಹಚ್ಚುವ ಕಾರ್ಯದಲ್ಲಿ ಪಾಲ್ಗೊಳಿಸಿ: ಮನೆಯಲ್ಲಿ ದೀಪ ಹಚ್ಚುವ ಕೆಲಸದಲ್ಲಿ ಮಕ್ಕಳಿಗೆ ಜವಾಬ್ದಾರಿ ನೀಡಿದರೆ, ಅವರು ಹಬ್ಬದಲ್ಲಿ ತಮ್ಮ ಪಾತ್ರವನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳುತ್ತಾರೆ.
-
ದೀಪಾವಳಿ ಕಥೆಗಳು: ಪಟಾಕಿ ಹಠ ಮಾಡಿದರೆ, ದೀಪಾವಳಿಯ ಹಿಂದಿರುವ ಪೌರಾಣಿಕ ಕಥೆಗಳನ್ನು, ಜೊತೆಗೆ ಪಟಾಕಿಯಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ವಿವರಿಸಿ. ಇದು ಮಕ್ಕಳಲ್ಲಿ ಅರಿವು ಮೂಡಿಸುತ್ತದೆ.
-
ಗಿಫ್ಟ್ ಪ್ಯಾಕಿಂಗ್, ಶುಭಾಶಯ ಕಾರ್ಡ್ ತಯಾರಿಕೆ: ಪಟಾಕಿಗೆ ಬದಲಾಗಿ ಸಿಹಿತಿಂಡಿಗಳ ಪ್ಯಾಕಿಂಗ್ ಅಥವಾ ಶುಭಾಶಯ ಕಾರ್ಡ್ ತಯಾರಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ. ಇದು ಸೃಜನಶೀಲತೆಯ ಜೊತೆಗೂಡಿ, ಸಾಮಾಜಿಕ ಪ್ರಜ್ಞೆ ಬೆಳೆಯಲು ಸಹಾಯ ಮಾಡುತ್ತದೆ.
ಪೋಷಕರು ಈ ರೀತಿಯ ಚಟುವಟಿಕೆಗಳನ್ನು ಮಕ್ಕಳಿಗೆ ನೀಡಿದರೆ, ದೀಪಾವಳಿ ಪಟಾಕಿ ಇಲ್ಲದಿದ್ದರೂ ಸಂತೋಷದ ಹಬ್ಬವಾಗಿ ಪರಿಣಮಿಸುತ್ತದೆ. ಈ ಮೂಲಕ ಹಬ್ಬದ ಉತ್ಸಾಹವನ್ನು ಕಾಪಾಡಿಕೊಂಡು, ಪರಿಸರ ಸ್ನೇಹಿ ಆಚರಣೆಗೂ ಸಾಧ್ಯವಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?