ಮಗು ಬೇಕಂದ್ರೆ ಮೈದುನ ಜತೆ ಮಲಗು ಎಂದ ಅತ್ತೆ..! ಡ್ಯಾಂಗೆ ಹಾರಿ ಪ್ರಾಣಬಿಟ್ಟ ಉಪನ್ಯಾಸಕಿ
ದೊಡ್ಡಬಳ್ಳಾಪುರ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಉಪನ್ಯಾಸಕಿಯೊಬ್ಬಳು ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರು ಸೋತೇನಹಳ್ಳಿ ಗ್ರಾಮದ ಪುಷ್ಪವತಿ (23).
ಮೃತಳ ತಂದೆ-ತಾಯಿಗೆ ನಾಲ್ವರು ಹೆಣ್ಣುಮಕ್ಕಳಿದ್ದು, ಪುಷ್ಪವತಿ ಕಿರಿಯ ಪುತ್ರಿಯಾಗಿದ್ದರು. ಕಳೆದ 2024ರ ನವೆಂಬರ್‌ನಲ್ಲಿ ತಪಸೀಹಳ್ಳಿಯ ವೇಣು ಎಂಬ ಯುವಕನೊಂದಿಗೆ ಲಕ್ಷಾಂತರ ರೂಪಾಯಿ ವರದಕ್ಷಿಣೆ ನೀಡಿ ಅದ್ದೂರಿಯಾಗಿ ಮದುವೆಯಾದರು. ಆದರೆ ಮದುವೆಯಾದ ನಂತರ ಪತಿ ವೇಣು ಸಂಸಾರ ಮಾಡದೇ ದೂರ ಉಳಿದಿದ್ದಾನೆಂದು ಕುಟುಂಬದವರು ತಿಳಿಸಿದ್ದಾರೆ.
ಪುಷ್ಪವತಿ ಪತಿಯ ಅತ್ತೆ ಭಾರತಿ ಮತ್ತು ಮಾವ ಗೋವಿಂದಪ್ಪ ಅವರ ಬಳಿ ವಿಷಯ ತಿಳಿಸಿದ್ದರೂ, ಅವರು ಮಗನ ಪರ ನಿಂತು “ದೊಡ್ಡಬಳ್ಳಾಪುರದಲ್ಲಿ ನಿವೇಶನ ಕೊಟ್ಟರೆ ಮಾತ್ರ ಸಂಸಾರ ಮಾಡ್ತಾನೆ” ಎಂದು ಷರತ್ತು ಹಾಕಿದ್ದರೆಂದೂ, “ಮಗು ಬೇಕೆಂದರೆ ಚಿಕ್ಕ ಮಗ (ಮೈದುನ) ಜೊತೆ ಮಲಗು” ಎಂಬ ಅವಮಾನಕಾರಿ ಮಾತುಗಳನ್ನಾಡಿದ್ದರೆಂದೂ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗೆ ನಡೆದ ಗಲಾಟೆಯ ವೇಳೆ ಪುಷ್ಪವತಿಯ ಮೇಲೆ ಪತಿ ಮತ್ತು ಮನೆಯವರು ಸೇರಿ ಹಲ್ಲೆ ನಡೆಸಿದ್ದರು. ಗಾಯಗೊಂಡಿದ್ದ ಪುಷ್ಪವತಿ ಬಳಿಕ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಅವರು ತವರು ಮನೆಗೆ ತೆರಳಿ ಕೆಲವು ದಿನ ವಿಶ್ರಾಂತಿ ಪಡೆದಿದ್ದರು.
ಆದರೆ ಕೆಲಸಕ್ಕೆ ಹಿಂತಿರುಗಿದ ಪುಷ್ಪವತಿಯನ್ನ ಒಂದು ದಿನ ದೊಡ್ಡಬಳ್ಳಾಪುರ ಡಿ-ಕ್ರಾಸ್ ಬಸ್ ನಿಲ್ದಾಣದಲ್ಲಿ ಪತಿ ವೇಣು ಅಡ್ಡಹಾಕಿ, “ನಮ್ಮ ಮೇಲೆಯೇ ಕಂಪ್ಲೇಂಟ್ ಕೊಡ್ತಿಯಾ? ನಿನಗೆ ಗತಿ ತೋರಿಸ್ತೀನಿ” ಎಂದು ಸಾರ್ವಜನಿಕರ ಎದುರೇ ಬೆದರಿಕೆ ಹಾಕಿದ್ದಾನೆಂದು ತಿಳಿದುಬಂದಿದೆ.
ಅದಾದ ನಂತರ ಪುಷ್ಪವತಿ ಕಾಲೇಜಿಗೆ ಹೋದಂತೆ ಹೇಳಿ ಮನೆಯಿಂದ ಹೊರಟು ವಾಪಾಸ್ ಆಗಿ ಬರಲಿಲ್ಲ. ಎರಡು ದಿನಗಳ ಬಳಿಕ ಅವರ ಶವ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ಪತ್ತೆಯಾಯಿತು. ಅವರ ಮೊಬೈಲ್‌ನಲ್ಲಿ ಆತ್ಮಹತ್ಯೆಗೆ ಮುನ್ನ ಮಾಡಿದ ಸೆಲ್ಫಿ ವೀಡಿಯೋ ಕೂಡ ಪತ್ತೆಯಾಗಿದೆ.
ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತಿ ವೇಣು ಹಾಗೂ ಮಾವ ಗೋವಿಂದಪ್ಪನನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ
ನಿಮ್ಮ ಪ್ರತಿಕ್ರಿಯೆ ಏನು?