ಮದುವೆಗೆ ಒಪ್ಪದಿದ್ದಕ್ಕೆ ಯುವತಿಯ ಪೋಷಕರನ್ನು ಕೊಂದ ಪಾಪಿ ವ್ಯಕ್ತಿ..!
ಮಗಳನ್ನು ಮದುವೆ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಪೋಷಕರನ್ನೇ ಹತ್ಯೆ ಮಾಡಿರುವ ಘಟನೆ ಶಿಕಾರಿಪರಾ ಪೊಲೀಸ್ ಠಾಣೆ ವ್ಯಾಪ್ತಿಯ ಸುಂದರಪ್ಲಾನ್ ಗ್ರಾಮದಲ್ಲಿ ನಡೆದಿದೆ.
ಚಾಕುವಿನಿಂದ ದಾಳಿ ನಡೆದ ಪರಿಣಾಮ ಸಾಹೇಬ್ ಹೆಂಬ್ರಾಮ್ (63) ಮತ್ತು ಪತ್ನಿ ಮಂಗಲಿ ಕಿಸ್ಕು (60) ಮೃತಪಟ್ಟಿದ್ದಾರೆ. ಅವರಿಬ್ಬರು ಹೆಣ್ಣುಮಕ್ಕಳಾದ ಹಿರಾಮುನಿ ಹೆಂಬ್ರಾಮ್ (25) ಹಾಗೂ ಬೆನಿ ಹೆಂಬ್ರಾಮ್ (17) ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರ ಮಗಳು ಹಿರಾಮುನಿ 2024ರಲ್ಲಿ ಫೇಸ್‌ಬುಕ್‌ನಲ್ಲಿ ಪಾಕೂರ್ ನಿವಾಸಿ ಲೋಕೇಶ್ ಜೊತೆ ಪರಿಚಯ ಬೆಳೆಸಿಕೊಂಡಿದ್ದರು. ದಿವ್ಯಾಂಗನಾಗಿದ್ದ ಲೋಕೇಶ್ ನಿರಂತರವಾಗಿ ಮದುವೆಗೆ ಒತ್ತಾಯ ಮಾಡುತ್ತಿದ್ದರೂ, ಕುಟುಂಬದವರು ಒಪ್ಪದೇ ಇದ್ದರು. ಕಳೆದ ಮೂರು ದಿನಗಳಿಂದ ಹಿರಾಮುನಿಯನ್ನು ಫೋನ್‌ನಲ್ಲಿ ಸಂಪರ್ಕಿಸಲು ವಿಫಲವಾದ ಲೋಕೇಶ್, ಆಕ್ರೋಶದಿಂದ ರಾತ್ರಿ 1 ಗಂಟೆ ಸುಮಾರಿಗೆ ಮನೆಗೆ ನುಗ್ಗಿ ದಂಪತಿಗಳ ಮೇಲೆ ದಾಳಿ ನಡೆಸಿದ್ದಾನೆ. ಇಬ್ಬರು ಸಹೋದರಿಯರೂ ತಡೆಯಲು ಮುಂದಾದಾಗ ಅವರ ಮೇಲೂ ದಾಳಿ ನಡೆಸಿದ್ದಾನೆ.
ಗಾಯಾಳುಗಳು ಪಕ್ಕದ ಮನೆಗೆ ಓಡಿ ಪಾರಾಗಿ ಜೀವ ಉಳಿಸಿಕೊಂಡಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಗಾಯಾಳುಗಳನ್ನು ಡುಮ್ಕಾ ಫೂಲ್ ಜಾನೋ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಮಾತನಾಡಿದ ಎಸ್ಪಿ ಪೀತಾಂಬರ್ ಸಿಂಗ್ ಖೇರ್ವಾರ್, “ವೃದ್ಧ ದಂಪತಿ ಸಾವಿಗೀಡಾಗಿದ್ದು, ಹೆಣ್ಣುಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಆರೋಪಿ ಲೋಕೇಶ್ ಪತ್ತೆಗೆ ವಿಶೇಷ ತಂಡವನ್ನು ನಿಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?