ಮನೆ ಕೆಲಸದ ವಿಚಾರವಾಗಿ ಜಗಳ: ಗಂಡನಿಗೆ ಚಾಕು ಇರಿದ ಹೆಂಡ್ತಿ

ಅಕ್ಟೋಬರ್ 28, 2025 - 22:22
 0  9
ಮನೆ ಕೆಲಸದ ವಿಚಾರವಾಗಿ ಜಗಳ: ಗಂಡನಿಗೆ ಚಾಕು ಇರಿದ ಹೆಂಡ್ತಿ
ವಾಷಿಂಗ್ಟನ್:- ಗಂಡ ಮನೆಯನ್ನು ಶುಚಿಯಾಗಿಟ್ಟುಕೊಂಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಆತನ ಕುತ್ತಿಗೆಗೆ ಪತ್ನಿ ಓರ್ವಳು ಚಾಕುವಿನಿಂದ ಇರಿದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
 
ಉತ್ತರ ಕೆರೊಲಿನಾದಲ್ಲಿ ಭಾರತ ಮೂಲದ ಮಹಿಳೆ ಒಬ್ಬರು ಮನೆಯನ್ನು ಸ್ವಚ್ಛಗೊಳಿಸದ ಕಾರಣಕ್ಕೆ ಕೋಪಗೊಂಡು, ಗಂಡನ ಕುತ್ತಿಗೆಗೆ ಚಾಕು ಇರಿದಿದ್ದಾಳೆ.
 
ಬಂಧಿತೆಯಾದ ಮಹಿಳೆಯನ್ನು ಚಂದ್ರಪ್ರಭಾ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಶಾಲೆಯಲ್ಲಿ ಶಿಕ್ಷಕ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 12ರಂದು ತಮ್ಮ ಪತಿ ಅರವಿಂದ್ ಸಿಂಗ್ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು.
 
ಪೊಲೀಸರ ಪ್ರಕಾರ ಈ ಘಟನೆ ಚಾರ್ಲೊಟ್‌ನ ಬ್ಯಾಲಂಟೈನ್ ಪ್ರದೇಶದ ಫಾಕ್ಸ್‌ಹೇವನ್ ಡ್ರೈವ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಮನೆಯ ಸ್ವಚ್ಛತೆಗೆ ಸಂಬಂಧಿಸಿದ ಸಣ್ಣ ವಿಷಯವೇ ದೊಡ್ಡ ವಿವಾದಕ್ಕೆ ತಿರುಗಿತ್ತು. ಕೋಪಗೊಂಡ ಚಂದ್ರಪ್ರಭಾ ಚಾಕು ಹಿಡಿದು ಗಂಡನ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
 
ಆದರೆ, ಆರೋಪಿತೆ ತಮ್ಮ ಹೇಳಿಕೆಯಲ್ಲಿ “ತಾನು ಊಟ ತಯಾರಿಸುತ್ತಿದ್ದಾಗ ಚಾಕು ಕೈಯಲ್ಲಿ ಇತ್ತು. ಅಂದುಕೊಂಡಂತಿಲ್ಲದ ರೀತಿಯಲ್ಲಿ ಚಾಕು ಗಂಡನ ಕುತ್ತಿಗೆಗೆ ತಾಗಿತು” ಎಂದು ಹೇಳಿಕೊಂಡಿದ್ದಾರೆ.
 
ಪೊಲೀಸರು ಬೆಳಿಗ್ಗೆ 10.49ಕ್ಕೆ ಸ್ಥಳಕ್ಕೆ ಧಾವಿಸಿದ್ದು, ಗಂಭೀರ ಗಾಯಗೊಂಡ ಅರವಿಂದ್ ಸಿಂಗ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರಂಭದಲ್ಲಿ ಚಂದ್ರಪ್ರಭಾ ಸಿಂಗ್ ಅವರಿಗೆ ಜಾಮೀನು ನಿರಾಕರಿಸಲ್ಪಟ್ಟಿದ್ದರೂ, ಬಳಿಕ ನ್ಯಾಯಾಲಯವು 10,000 ಡಾಲರ್ ಜಾಮೀನು ಮತ್ತು ಎಲೆಕ್ಟ್ರಾನಿಕ್ ಮಾನಿಟರಿಂಗ್ ಸಾಧನ ಧರಿಸುವ ಷರತ್ತಿನಡಿ ಅವರನ್ನು ಬಿಡುಗಡೆ ಮಾಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow