ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಆಟವಾಡುತ್ತಿದ್ದ ಬಾಲಕಿ ದಿಢೀರನೆ ಕುಸಿದು ಬಿದ್ದು ಸಾವು..!

ಮೆದುಳಿನ ರಕ್ತಸ್ರಾವವು ಮಾರಣಾಂತಿಕ ಸ್ಥಿತಿಯಾಗಿದೆ. ತಲೆಯ ಒಳಗಿನ ರಕ್ತನಾಳದ ಛಿದ್ರದಿಂದಾಗಿ ರಕ್ತಸ್ರಾವ ಉಂಟಾಗುತ್ತದೆ. ಇದೀಗ ಅದೇ ಕಾಯಿಲೆಯಿಂದ ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದ ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ಐದು ವರ್ಷದ ಮಗು ಮೃತಪಟ್ಟಿರುವ ಘಟನೆ ನಡೆದಿದೆ. ಅಲಿಯಾ ಮಹ್ಮದ್ ರಿಯಾಜ್ ಮೃತ ಬಾಲಕಿಯಾಗಿದ್ದು, ದೈನಂದಿನಂತೆ ಬಾಲಕಿ ಅಂಗನವಾಡಿಗೆ ಹೋಗಿದ್ದಳು. ಮುಂಜಾನೆ ಉಪಹಾರ ಸೇವಿಸಿದ್ದ ಬಾಲಕಿ ಚಟುವಟಿಕೆಯಿಂದಲೇ ಇದ್ದಳು. ಅಂಗನವಾಡಿಯಲ್ಲಿ ಎಲ್ಲ ಮಕ್ಕಳಂತೆ ಆಟವಾಡಿಕೊಂಡಿದ್ದಳು.
ಆದರೆ, ಮಧ್ಯಾಹ್ನ ಆಟವಾಡುತ್ತಿದ್ದಾಗ ದಿಢೀರನೆ ಕುಸಿದು ಬಿದ್ದಿದ್ದಾಳೆ. ಪೀಟ್ಸ್ ಬಂದವರಂತೆ ಆಡಿದ್ದಾಳೆ. ಬಾಲಕಿಯನ್ನು ನೋಡಿ ಅಂಗನವಾಡಿ ಸಹಾಯಕಿ ಓಡಿ ಬಂದಿದ್ದಾಳೆ. ಕೂಡಲೇ ಪಾಲಕರಿಗೆ ಮಾಹಿತಿ ನೀಡಲಾಗಿದೆ. ಕೂಡಲೆ ಬಾಲಕಿಯನ್ನು ಸಮೀಪದ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಸ್ಪತ್ರೆಗೆ ಹೋಗುವ ಮುನ್ನವೇ ಬಾಲಕಿ ಮೃತಪಟ್ಟಿದ್ದಳು.
ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಬಾಲಕಿ ದೇಹವನ್ನು ಪರಿಶೀಲಿಸಿದ್ದಾರೆ. ಗಾಯದ ಗುರುತುಗಳೇನಾದರೂ ಇವೆಯಾ ಅಂತ ಪರಿಶೀಲಿಸಿದ್ದಾರೆ. ಜೊತೆಗೆ ಎಕ್ಸರೇ ಮಾಡಿ, ಬಾಲಕಿ ಏನಾದರೂ ನುಂಗಿದ್ದಾಳಾ ಎಂದು ಕೂಡ ಪರಿಶೀಲನೆ ಮಾಡಿದ್ದಾರೆ. ಆದರೆ, ದೇಹದೊಳಗೆ ಏನೇನು ಇರಲಿಲ್ಲ ಎಂಬುವುದು ಗೊತ್ತಾಗಿದೆ.
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಮಗು ಮೃತಪಟ್ಟಿದೆ ಅಂತ ವೈದ್ಯರು ಪಾಲಕರಿಗೆ ಮಾಹಿತಿ ನೀಡಿದ್ದಾರೆ. ದಿಢೀರನೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಕೆಲವರಿಗೆ ಈ ರೀತಿಯಾಗುತ್ತದೆ. ಬಾಲಕಿ ಸಾವಿಗೆ ಇದೇ ಕಾರಣ ಅಂತ ಪೋಷಕರಿಗೆ ತಿಳಿಸಿದ್ದಾರೆ. ಆರಂಭದಲ್ಲಿ ಅಂಗನವಾಡಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದ ಪೋಷಕರು, ವೈದ್ಯರ ಮಾಹಿತಿ ನಂತರ ಸುಮ್ಮನಾಗಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ನಿಮ್ಮ ಪ್ರತಿಕ್ರಿಯೆ ಏನು?






