ಮೋದಿ ಸರ್ಕಾರದಿಂದ ಐತಿಹಾಸಿಕ ನಿರ್ಧಾರ: 'ಒಂದು ದೇಶ-ಒಂದು ಚುನಾವಣೆ' ಮಸೂದೆ ಮಂಡನೆ..!

ಡಿಸೆಂಬರ್ 17, 2024 - 18:01
 0  13
ಮೋದಿ ಸರ್ಕಾರದಿಂದ ಐತಿಹಾಸಿಕ ನಿರ್ಧಾರ: 'ಒಂದು ದೇಶ-ಒಂದು ಚುನಾವಣೆ' ಮಸೂದೆ ಮಂಡನೆ..!

ನವದೆಹಲಿ: ಕಳೆದ ಚುನಾವಣೆ ವೇಳೆ ಬಿಜೆಪಿಯ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಘೋಷಣೆಯಾದ ‘ಒಂದು ದೇಶ ಒಂದು ಚುನಾವಣೆ’ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡನೆ ಮಾಡಲಾಗಿದೆ. ಹೌದು  ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಕೇಂದ್ರ ಸರ್ಕಾರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ.

ಆದರೆ, ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ. ಈ ಮಸೂದೆಯನ್ನು ಅಸಂವಿಧಾನಿಕ, ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಇದು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸುತ್ತಿವೆ. ಇದರ ಬೆನ್ನಲ್ಲೇ ಮಸೂದೆಯನ್ನು ವಿಸ್ತೃತ ಪರಾಮರ್ಶೆಗಾಗಿ ಜಂಟಿ ಸದನ ಸಮಿತಿಗೆ ಕಳುಹಿಸಲಾಗಿದೆ. 

ಒಂದು ದೇಶ, ಒಂದು ಚುನಾವಣೆಗಾಗಿ ಸಂವಿಧಾನದ 129ನೇ ತಿದ್ದುಪಡಿ ಮಸೂದೆ 2024 ಅನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಡಿಸಿದರು. ಆದರೆ, ವಿರೋಧ ಪಕ್ಷಗಳು ಇದನ್ನು ತೀವ್ರವಾಗಿ ಕಂಡಿಸಿವೆ. ಈ ಮಸೂದೆಯ ಅಗತ್ಯ ಏನಿತ್ತು ಎಂದು ಪ್ರತಿಪಕ್ಷಗಳು ಸರ್ಕಾರವನ್ನು ಪ್ರಶ್ನಿಸಿವೆ. ಈ ಹಿನ್ನೆಲೆ ಮಸೂದೆಯನ್ನು ಜಂಟಿ ಸದನ ಸಮಿತಿಗೆ ಕಳುಹಿಸುವ ನಿರ್ಧಾರಕ್ಕೆ ಲೋಕಸಭೆ ಬಂದಿದೆ.

ಸರ್ಕಾರ ಕೂಡ ಯಾವುದೇ ವಿರೋಧ ವ್ಯಕ್ತಪಡಿಸದೇ ಜಂಟಿ ಸದನ ಸಮಿತಿಗೆ ಮಸೂದೆಯನ್ನು ಕಳುಹಿಸಲು ಒಪ್ಪಿಕೊಂಡಿದೆ. ಅಲ್ಲಿ ವಿಸ್ತೃತ ಚರ್ಚೆಯಾಗಿ, ಅಗತ್ಯ ಮಾರ್ಪಾಡುಗಳ ಬಳಿಕ ಮತ್ತೊಂದು ಬಾರಿ ಮಸೂದೆ ಎರಡು ಸದನಗಳಲ್ಲಿ ಮಂಡನೆಯಾಗಲಿದ್ದು, ಆಗ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯ ಭವಿಷ್ಯ ನಿರ್ಧಾರವಾಗಲಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow