ರಾಜ್ಯದಲ್ಲಿ RSS ಚಟುವಟಿಕೆಗೆ ಬ್ರೇಕ್ ಹಾಕಲಿದೆಯಾ ಸರ್ಕಾರ..!?

ಅಕ್ಟೋಬರ್ 12, 2025 - 16:07
 0  10
ರಾಜ್ಯದಲ್ಲಿ RSS ಚಟುವಟಿಕೆಗೆ ಬ್ರೇಕ್ ಹಾಕಲಿದೆಯಾ ಸರ್ಕಾರ..!?

ಬೆಂಗಳೂರು: 100 ವರ್ಷಗಳನ್ನು ಪೂರೈಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ರಾಜ್ಯ ಸರ್ಕಾರದಿಂದ ದೊಡ್ಡ ಶಾಕ್ ಸಿಕ್ಕಿದೆ. ಸಾರ್ವಜನಿಕ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೆಲ ಶಾಸಕರು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶಾಲಾ-ಕಾಲೇಜುಗಳ ಆವರಣ, ಉದ್ಯಾನವನಗಳು, ಸರ್ಕಾರಿ ಮೈದಾನಗಳು ಮತ್ತು ಹಾಸ್ಟೆಲ್ ಕ್ಯಾಂಪಸ್‌ಗಳಲ್ಲಿ RSS ಶಾಖೆ ಚಟುವಟಿಕೆಗಳನ್ನು ನಿರ್ಬಂಧಿಸಲು ಆಗ್ರಹಿಸಿದ್ದಾರೆ. ಕಾನೂನಾತ್ಮಕವಾಗಿ ಸಂಘವನ್ನು ನಿಷೇಧಿಸಲು ಸಾಧ್ಯವಿಲ್ಲವೆಂಬ ಅರಿವಿನ ಹಿನ್ನೆಲೆಯಲ್ಲಿ, ಸರ್ಕಾರಿ ಸ್ಥಳಗಳಲ್ಲಿ ಅವರ ಚಟುವಟಿಕೆಗಳ ಮೇಲೆ ಮಾತ್ರ ನಿರ್ಬಂಧ ಹೇರುವ ಪ್ರಸ್ತಾವನೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಕೆಯಾಗಿದೆ.

ಪ್ರಸ್ತಾವನೆಯ ಅಂಶಗಳು:

ಜನರಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳನ್ನು ತಡೆಗಟ್ಟಲು ಸಂವಿಧಾನ ನೀಡಿರುವ ಅಧಿಕಾರದಡಿ ಕ್ರಮ ಕೈಗೊಳ್ಳಬೇಕು.

RSS ಸಂಘಟನೆಯು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು, ಮೈದಾನಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಿದ್ದು, ಮಕ್ಕಳ ಹಾಗೂ ಯುವಕರ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆ ತುಂಬುತ್ತಿದೆ ಎಂದು ಪ್ರಸ್ತಾವನೆಯಲ್ಲಿ ಆರೋಪಿಸಲಾಗಿದೆ.

ಪೊಲೀಸ್ ಅನುಮತಿಯಿಲ್ಲದೆ ದೊಣ್ಣೆಗಳನ್ನು ಹಿಡಿದು ಪ್ರದರ್ಶನ ನಡೆಸುವುದರಿಂದ ಯುವಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಆದ್ದರಿಂದ ಸರ್ಕಾರಿ ಶಾಲೆಗಳು, ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು ಮತ್ತು ಪುರಾತತ್ವ ಇಲಾಖೆಯ ಸ್ಥಳಗಳಲ್ಲಿ RSS ಶಾಖೆ ಚಟುವಟಿಕೆಗಳನ್ನು ನಿಷೇಧಿಸಲು ಶಿಫಾರಸು ಮಾಡಲಾಗಿದೆ.

RSS ಕಾನೂನುಬಾಹಿರ ಸಂಘಟನೆಯೆಂದು ಆರೋಪ:

RSS ನೋಂದಣಿ ಇಲ್ಲದ ಸಂಘಟನೆಯಾಗಿದ್ದು, ನೋಂದಣಿ ದಾಖಲೆಗಳಿದ್ದರೆ ತೋರಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸವಾಲು ಹಾಕಿದ್ದಾರೆ. "RSSಗೆ ಪೊಲೀಸರು ಅನುಮತಿ ನೀಡಿದ್ದೇಕೆ? ತಮಿಳುನಾಡಿನಲ್ಲಿ ಅನುಮತಿ ಇಲ್ಲದೆ RSS ಕಾರ್ಯಕ್ರಮ ನಡೆಸಿದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ. ನಮ್ಮ ರಾಜ್ಯದಲ್ಲಿಯೂ ಇದೇ ರೀತಿಯ ಕ್ರಮ ಕೈಗೊಳ್ಳಬೇಕು," ಎಂದು ಅವರು ಆಗ್ರಹಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow