ರೈಲ್ವೆ ಪರೀಕ್ಷೆಯಲ್ಲೂ ಜನಿವಾರ-ಮಂಗಳಸೂತ್ರ ತೆಗೆಯುವಂತೆ ಸೂಚನೆ: ಸಚಿವ ಸೋಮಣ್ಣ ಹೇಳಿದ್ದೇನು..?

ಎಪ್ರಿಲ್ 28, 2025 - 13:58
 0  19
ರೈಲ್ವೆ ಪರೀಕ್ಷೆಯಲ್ಲೂ ಜನಿವಾರ-ಮಂಗಳಸೂತ್ರ ತೆಗೆಯುವಂತೆ ಸೂಚನೆ: ಸಚಿವ ಸೋಮಣ್ಣ ಹೇಳಿದ್ದೇನು..?

ಬೆಂಗಳೂರು: ಜನಿವಾರ ವಿವಾದ ಕರ್ನಾಟಕದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದಲ್ಲದೆ, ಹಿಂದೂ ಧಾರ್ಮಿಕ ಆಚರಣೆಗಳಿಗೆ ಕಾಂಗ್ರೆಸ್ ಸರ್ಕಾರ ಧಕ್ಕೆ ತರುತ್ತಿದೆ ಎಂದು ಹಿಂದೂ ಪರ ಸಂಘಟನೆಗಳು ಕಿಡಿಕಾರಿದ್ದವು. ಇದೀಗ ರೈಲ್ವೆ ಇಲಾಖೆ ವಿರುದ್ಧವೂ ಅಂಥದ್ದೇ ಆರೋಪ ಕೇಳಿಬಂದಿದೆ. ಇದಕ್ಕೆ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಮಧ್ಯ ಪ್ರವೇಶಿಸಿ, ಪರೀಕ್ಷಾರ್ಥಿಗಳು ಧಾರ್ಮಿಕ ಸಂಕೇತಗಳನ್ನು ಹಾಗೂ ಮಂಗಳಸೂತ್ರವನ್ನು ತೆಗೆಯಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಧಾರ್ಮಿಕ ಸಂಕೇತಗಳನ್ನು ಹಾಗೂ ಮಂಗಳಸೂತ್ರವನ್ನು ತೆಗೆಸದಂತೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ.

‘ಭಾರತೀಯ ರೈಲ್ವೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ಬರೆಯುವವರು ಮಂಗಳಸೂತ್ರ, ಜನಿವಾರದಂತಹ ಧಾರ್ಮಿಕ ಸಂಕೇತಗಳು ಮತ್ತು ಆಭರಣಗಳನ್ನು ತೆಗೆಯುವಂತೆ ಮಾಡಬಾರದು. ಜನಿವಾರ, ಮಂಗಳಸೂತ್ರ ತೆಗೆಸದಂತೆ ಅಧಿಕಾರಿಗಳಿಗೆ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಸೂಚನೆ ನೀಡಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತಿದೆ.

 ಮಂಗಳಸೂತ್ರ ಹಾಗೂ ಧಾರ್ಮಿಕ ಸಂಕೇತಗಳನ್ನು ತೆಗೆಯಬೇಕೆಂದು ಹಾಲ್​ಟಿಕೆಟ್​ನಲ್ಲಿ ಉಲ್ಲೇಖಿಸಲ್ಪಟ್ಟಿದ್ದ ಬಗ್ಗೆ ನಾವು ಅವರ ಗಮನಕ್ಕೆ ತಂದಿದ್ದೆವು. ಅವರು ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ಎಕ್ಸ್​ ಸಂದೇಶದ ಮೂಲಕ ಬ್ರಿಜೇಶ್ ಚೌಟ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗ, ಧಾರವಾಡ ಮತ್ತು ಬೀದರ್ ಜಿಲ್ಲೆಗಳಲ್ಲಿ ಕರ್ನಾಟಕ ಸಿಇಟಿ ಪರೀಕ್ಷೆಗೆ ಹಾಜರಾದ ಬ್ರಾಹ್ಮಣ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಪ್ರಕರಣ ಕರ್ನಾಟಕದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಸದ್ಯ ಕರ್ನಾಟಕ ಹೈಕೋರ್ಟ್​​​ನಲ್ಲಿ ಪಿಎಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಕೂಡ ಸಲ್ಲಿಕೆಯಾಗಿದೆ. ಇಂಥ ಸಂದರ್ಭದಲ್ಲೇ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯ ಪ್ರವೇಶ ಪತ್ರ ಕೂಡ ವಿವಾದಕ್ಕೆ ಗುರಿಯಾಗಿತ್ತು.

ರೈಲ್ವೆ ನೇಮಕಾತಿ ಮಂಡಳಿ ಕ್ರಮದ ವಿರುದ್ಧ ವಿಎಚ್​​ಪಿ ಮುಖಂಡ ಶರಣ್ ಪಂಪುವೆಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಹಿಂದೂಗಳ ಭಾವನೆಗೆ ಧಕ್ಕೆಬಾರದ ರೀತಿಯಲ್ಲಿ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಸಂಸದರು ಹಾಗೂ ಸರ್ಕಾರವನ್ನು ಆಗ್ರಹಿಸಿದ್ದರು. ಇದೀಗ ಅಂತಿಮವಾಗಿ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವರ ಮಧ್ಯ ಪ್ರವೇಶದಿಂದ ಸಮಸ್ಯೆ ಬಗೆಹರಿದಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow