ಲಕ್ನೋ ಮಣಿಸಿ ಕ್ವಾಲಿಫೈಯರ್ 2ರಲ್ಲಿ ಸ್ಥಾನ ಪಡೆದ ಆರ್ ಸಿಬಿ! ಹೇಗಿತ್ತು ಉಭಯ ತಂಡಗಳ ಹೋರಾಟ!

ಐಪಿಎಲ್ ಪಂದ್ಯದಲ್ಲಿ ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ತಂಡ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.
ಲಖನೌ ನಲ್ಲಿ ನಡೆದ ಐಪಿಎಲ್ 2025 ರ 70 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಲಖನೌ ತಂಡ ಭಾರಿ ಮುಖಭಂಗ ಎದುರಿಸಿದೆ. ಆತಿಥೇಯ ತಂಡದ ವಿರುದ್ಧ ಆರ್ ಸಿಬಿ 6 ವಿಕೆಟ್ ಗಳ ಅಂತರದಿಂದ ಗೆಲುವನ್ನು ತನ್ನದಾಗಿಸಿಕೊಂಡಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿ ತಂಡದ ವಿರುದ್ಧ ಲಖನೌ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಗಳ ಉತ್ತಮ ಮೊತ್ತದ ಸ್ಕೋರ್ ದಾಖಲಿಸಿತು. ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಕೇವಲ 37 ಎಸೆತಗಳಲ್ಲಿ 67 ರನ್ ಗಳಿಸಿದರೆ, ರಿಷಭ್ ಪಂತ್ 61 ಎಸೆತಗಳಲ್ಲಿ 118 ರನ್ ಗಳಿಸಿ ತಂಡ ಬೃಹತ್ ಮೊತ್ತ ದಾಖಲಿಸಲು ನೆರವಾದರು.
227 ರನ್ ಗಳ ಟಾರ್ಗೆಟ್ ಚೇಸಿಂಗ್ ನಲ್ಲಿ ಆರ್ ಸಿಬಿಗೆ ಸಾಲ್ಟ್ ( 19 ಎಸೆತಗಳಲ್ಲಿ 30 ರನ್) ಮತ್ತು ವಿರಾಟ್ ಕೊಹ್ಲಿ (30 ಎಸೆತಗಳಲ್ಲಿ 54 ರನ್) ಗಳಿಸಿ ಉತ್ತಮ ಜೊತೆಯಾಟ ನೀಡಿದರು. ಪಾಟೀದಾರ್ 7 ಎಸೆತಗಳಲ್ಲಿ 14 ರನ್ ಹಾಗೂ ಲಿವಿಂಗ್ಸ್ಟೋನ್ 1 ಎಸೆತ ಎದುರಿಸಿ ಶೂನ್ಯ ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಆದರೆ ಮಯಾಂಕ್ ಅಗರ್ವಾಲ್ (23 ಎಸೆತಗಳಲ್ಲಿ 41 ರನ್) ಹಾಗೂ ಜಿತೇಶ್ ಶರ್ಮಾ (33 ಎಸೆತಗಳಲ್ಲಿ 85 ರನ್) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನ ಮೂಲಕ ಆರ್ ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಫಸ್ಟ್ ಮ್ಯಾಚ್ನಲ್ಲಿ ಫೇಲ್ ಆಗಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ನಿನ್ನೆ ಅದ್ಭುತವಾದ ಇನ್ನಿಂಗ್ಸ್ ಕಟ್ಟಿದ್ರು. ಮಯಾಂಕ್ ಜೊತೆಯಾದ ಕ್ಯಾಪ್ಟನ್ ಜಿತೇಶ್ ಶರ್ಮಾ ನಾಯಕನ ಇನ್ನಿಂಗ್ಸ್ ಕಟ್ಟಿದ್ರು. ಲಕ್ನೋ ಬೌಲಿಂಗ್ ದಾಳಿಯನ್ನ ಚಿಂದಿ ಉಡಾಯಿಸಿದ ಜಿತೇಶ್, ಬೌಂಡರಿ, ಸಿಕ್ಸರ್ಗಳನ್ನ ಚಚ್ಚಿ ಬಿಸಾಕಿದ್ರು.
ಲಕ್ನೋ ಬೌಲರ್ಗಳನ್ನ ಮನಸೋ ಇಚ್ಚೆ ದಂಡಿಸ್ತಾ ಇದ್ದ ಜಿತೇಶ್ ಶರ್ಮಾ ಲಕ್ನೋ ಕೂಡ ಸಾಥ್ ಕೊಡ್ತು. ಜೀವದಾನ ಪಡೆದುಕೊಂಡ ಜಿತೇಶ್ ಶರ್ಮಾ ಜಸ್ಟ್ 22 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ರು. ಅದೂ ಭರ್ಜರಿ ಸಿಕ್ಸರ್ನೊಂದಿಗೆ. ಹಾಫ್ ಸೆಂಚುರಿ ಬಳಿಕ ಜಿತೇಶ್ ಶರ್ಮಾ ಅಬ್ಬರ ಮತ್ತಷ್ಟು ಜೋರಾಗಿತ್ತು. ವಿಲಿಯಮ್ ರೋರ್ಕ್ ಎಸೆದ 18ನೇ ಓವರ್ನಲ್ಲಿ 3 ಬೌಂಡರಿ, 2 ಭರ್ಜರಿ ಸಿಕ್ಸರ್ ಚಚ್ಚಿದ್ರು. 21 ರನ್ಗಳು ಅದೊಂದೆ ಓವರ್ನಲ್ಲಿ ಹರಿದು ಬಂದ್ವು.
ಜಿತೇಶ್ ಶರ್ಮಾಗೆ ಸಾಥ್ ಕೊಟ್ಟ ಕನ್ನಡಿಗ ಮಯಾಂಕ್ ಅಗರ್ವಾಲ್ 5 ಸೊಗಸಾದ ಬೌಂಡರಿ ಬಾರಿಸಿದ್ರು. 178ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಮಯಾಂಕ್ ಅಗರ್ವಾಲ್ 23 ಎಸೆತಗಳಲ್ಲಿ 41 ರನ್ಗಳಿಸಿದ್ರು. ಬರೋಬ್ಬರಿ 257.58ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಜಿತೇಶ್ ಶರ್ಮಾ 6 ಭರ್ಜರಿ ಸಿಕ್ಸರ್, 8 ಸಾಲಿಡ್ ಬೌಂಡರಿ ಬಾರಿಸಿದ್ರು. ಜಸ್ಟ್ 33 ಎಸೆತಗಳಲ್ಲಿ 85 ರನ್ ಚಚ್ಚಿದ್ರು.,
ಮಯಾಂಕ್ ಅಗರ್ವಾಲ್-ಜಿತೇಶ್ ಶರ್ಮಾ ಅಜೇಯ 107 ರನ್ಗಳ ಜೊತೆಯಾಟವಾಡಿದ್ರು. 18.4ನೇ ಎಸೆತವನ್ನ ಸಿಕ್ಸರ್ ಸಿಡಿಸಿದ ಜಿತೇಶ್ ಶರ್ಮಾ, ಆರ್ಸಿಬಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಗೆಲುವಿನ ಗಡಿ ದಾಟಿದ ಬೆನ್ನಲ್ಲೇ ಆರ್ಸಿಬಿ ಕ್ಯಾಂಪ್ನಲ್ಲಿ ಭರ್ಜರಿ ಸಂಭ್ರಮಾಚರಣೆ ನಡೀತು. ಕಿಂಗ್ ಕೊಹ್ಲಿಯಂತೂ ಸಂಭ್ರಮದ ಕಡಲಲ್ಲಿ ತೇಲಾಡಿದ್ರು.
ನಿಮ್ಮ ಪ್ರತಿಕ್ರಿಯೆ ಏನು?






