ಶಾಲಾ ಶುಲ್ಕ ಮರುಪಾವತಿ ಕೇಳಿದ ರೈತನನ್ನು ಹೊಡೆದು ಕೊಂದ ಶಾಲಾ ಅಧಿಕಾರಿಗಳು

ಮುಂಬೈ: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ, ಮಗಳ ಶಾಲಾ ಶುಲ್ಕ ಮರುಪಾವತಿಸಲು ಕೇಳಿದ್ದ ಕಾರಣಕ್ಕೆ ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಹಾಗೂ ಅವರ ಪತ್ನಿ ಸೇರಿ ರೈತನೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ.
ಮೃತನನ್ನು ಜಗನ್ನಾಥ್ ಹೆಂಗ್ಡೆ (46) ಎಂಬ ರೈತನೆಂದು ಗುರುತಿಸಲಾಗಿದೆ. ಪೂರ್ಣದ ಝೀರೋ ಫಾಟಾ ಪ್ರದೇಶದಲ್ಲಿರುವ ಖಾಸಗಿ ವಸತಿ ಶಾಲೆಯೊಂದರಲ್ಲಿ ಜಗನ್ನಾಥ್ ಅವರ ಮಗಳು ವ್ಯಾಸಂಗ ಮಾಡುತ್ತಿದ್ದಳು. ಆದಾಗ್ಯೂ, ಅವರು ಕೆಲ ಕಾರಣಗಳಿಂದ ಮಗಳನ್ನು ಬೇರೆ ಶಾಲೆಗೆ ಸೇರಿಸಿದ್ದರು.
ಇದರಿಂದಾಗಿ, ಹೆಂಗ್ಡೆ ಅವರು ಮರುಪಾವತಿ ಮತ್ತು ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಶಾಲೆಗೆ ಭೇಟಿ ನೀಡಿದಾಗ, ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಹಾಗೂ ಆತನ ಪತ್ನಿ (ಅವರು ರಾಜಕೀಯ ಸಂಪರ್ಕ ಹೊಂದಿರುತ್ತಾರೆ ಎಂಬ ಮಾಹಿತಿ ಇದೆ) ಅವರೊಂದಿಗೆ ವಾದವಿವಾದ ನಡೆದಿದೆ. ವಿಷಯ ವಿಕೋಪಕ್ಕೆ ಹೋಗಿ, ಇಬ್ಬರೂ ಜಗನ್ನಾಥ್ ಅವರನ್ನು ಅಮಾನುಷವಾಗಿ ಥಳಿಸಿದರು.
ತೀವ್ರ ಹಲ್ಲೆಗೊಳಗಾದ ಹೆಂಗ್ಡೆ ಅವರು ಸ್ಥಳದಲ್ಲೇ ಸಾವಿಗೀಡಾದರು. ಘಟನೆಯ ನಂತರ, ಪೂರ್ಣ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಹತ್ಯೆ ಆರೋಪದಡಿ ಪ್ರಕರಣ ದಾಖಲಾಗಿದೆ, ಮತ್ತು ತನಿಖೆ ಮುಂದುವರಿದಿದೆ.
ನಿಮ್ಮ ಪ್ರತಿಕ್ರಿಯೆ ಏನು?






