ಏಷ್ಯಾಕಪ್ ಟ್ರೋಫಿ ಕದ್ದೊಯ್ದ ನಖ್ವಿಗೆ ಗೋಲ್ಡ್ ಮೆಡಲ್ ಸನ್ಮಾನಕ್ಕೆ ಮುಂದಾದ ಪಾಕ್..!
ಏಷ್ಯಾಕಪ್ ಚಾಂಪಿಯನ್ ಟೀಂ ಇಂಡಿಯಾಗೆ ಟ್ರೋಫಿ ಹಾಗೂ ಪದಕಗಳನ್ನು ನೀಡದೆ ವಿಶ್ವ ಕ್ರಿಕೆಟ್ನ ಮುಂದೆ “ಟ್ರೋಫಿ ಕಳ್ಳ” ಎಂದೇ ಕುಖ್ಯಾತಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಪಾಕಿಸ್ತಾನದಲ್ಲಿ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಸುದ್ದಿ ಪೋರ್ಟಲ್ ದಿ ನೇಷನ್ ವರದಿ ಪ್ರಕಾರ, 2025ರ ಏಷ್ಯಾಕಪ್ನಲ್ಲಿ ನಖ್ವಿ ತಾಳಿದ “ದಿಟ್ಟ ನಿರ್ಧಾರಗಳು”ಗಾಗಿ ಶಹೀದ್ ಜುಲ್ಫಿಕರ್ ಅಲಿ ಭುಟ್ಟೋ ಎಕ್ಸಲೆನ್ಸ್ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ. ಸಿಂಧ್ ಮತ್ತು ಕರಾಚಿ ಬ್ಯಾಸ್ಕೆಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಗುಲಾಮ್ ಅಬ್ಬಾಸ್ ಜಮಾಲ್ ಅವರು ಈ ಘೋಷಣೆ ಮಾಡಿದ್ದು, “ನಿರ್ಭೀತ ಹಾಗೂ ತತ್ವಬದ್ಧ ನಿರ್ಧಾರಗಳಿಂದ ಪಾಕಿಸ್ತಾನಕ್ಕೆ ಗೌರವ ತಂದಿದ್ದಾರೆ” ಎಂಬ ಕಾರಣವನ್ನು ನೀಡಿದ್ದಾರೆ.
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಅಜೇಯವಾಗಿ ಉಳಿದು ಏಷ್ಯಾಕಪ್ ಗೆದ್ದಿತು. ಆ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಮೊಹ್ಸಿನ್, ಎಸಿಸಿಯ ಪ್ರಸ್ತುತ ಅಧ್ಯಕ್ಷರಾಗಿರುವ ಕಾರಣ ಟ್ರೋಫಿಯನ್ನು ಪ್ರದಾನ ಮಾಡಲು ಬಂದಿದ್ದರು. ಆದರೆ ಟೀಂ ಇಂಡಿಯಾ ಮೊಹ್ಸಿನ್ ಅವರಿಂದ ಅದನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಇದಕ್ಕೆ ಕಾರಣವನ್ನು ನೀಡಿದ್ದ ಟೀಂ ಇಂಡಿಯಾ, ಮೊಹ್ಸಿನ್ ನಖ್ವಿ ಪಾಕಿಸ್ತಾನ ಸರ್ಕಾರದಲ್ಲಿ ಸಚಿವರೂ ಆಗಿರುವ ಕಾರಣ ನಾವು ಅವರಿಂದ ಟ್ರೋಫಿಯನ್ನು ಸ್ವೀಕರಿಸುತ್ತಿಲ್ಲ ಎಂದಿತ್ತು. ಆದಾಗ್ಯೂ, ಮೊಹ್ಸಿನ್ ನಾಚಿಕೆಯಿಲ್ಲದೆ ವೇದಿಕೆಯ ಮೇಲೆ ನಿಂತಿದ್ದರು. ನಂತರ ಟ್ರೋಫಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೊರಟುಹೋಗಿದ್ದರು. ಇದು ಕೋಲಾಹಲಕ್ಕೆ ಕಾರಣವಾಗಿತ್ತು.
ನಿಮ್ಮ ಪ್ರತಿಕ್ರಿಯೆ ಏನು?