ಚಿಕ್ಕಮಗಳೂರು: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ! ಕುಟುಂಬ ಕಲಹವೇ ಕಾರಣ

ಅಕ್ಟೋಬರ್ 16, 2025 - 22:02
 0  27
ಚಿಕ್ಕಮಗಳೂರು: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ! ಕುಟುಂಬ ಕಲಹವೇ ಕಾರಣ

ಚಿಕ್ಕಮಗಳೂರು: ಬೆಂಗಳೂರಿನಲ್ಲಿ ವೈದ್ಯೆ ಕೃತಿಕಾ ಹತ್ಯೆ ಪ್ರಕರಣದ ನಂತರ, ಇದೀಗ ಚಿಕ್ಕಮಗಳೂರಿನಲ್ಲೂ ಪತಿಯಿಂದಲೇ ಪತ್ನಿಯ ಕೊಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ತನು (25) ಎಂಬ ಯುವತಿ ಮೃತಪಟ್ಟಿದ್ದು, ಪತಿ ರಮೇಶ್‌ ಆರೋಪಿಯಾಗಿದ್ದಾನೆ. ಮನೆಯ ಒಳಗಡೆ ರಕ್ತದ ಮಡುವಿನಲ್ಲಿ ಪತ್ನಿಯ ಶವ ಪತ್ತೆಯಾಗಿದೆ.

ತನು ಮತ್ತು ರಮೇಶ್‌ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಆರು ವರ್ಷದ ಗಂಡು ಮಗು ಇದೆ. ಗಂಡನೊಂದಿಗೆ ಆಗಾಗ ಜಗಳವಾಗುತ್ತಿದ್ದ ಕಾರಣ ತನು ಕಳೆದ ಎರಡು ವರ್ಷಗಳಿಂದ ತೋಟದ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಬುಧವಾರ ರಾತ್ರಿ ಕುಡಿದು ಬಂದ ರಮೇಶ್‌, ಪತ್ನಿಯನ್ನೇ ಕ್ರೂರವಾಗಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿದ ಬಳಿಕ ರಮೇಶ್‌ ತಾನೂ ಗಾಯ ಮಾಡಿಕೊಂಡು “ಅಪಘಾತವಾಗಿದೆ” ಎಂದು ಕಥೆ ಹೇಳಲು ಪ್ರಯತ್ನಿಸಿದ್ದಾನೆ. ಆದರೆ ತನಿಖೆಯಲ್ಲಿ ಪತ್ನಿಯ ಹತ್ಯೆಯೇ ನಡೆದಿರುವುದು ಬಹಿರಂಗವಾಗಿದೆ.

ತನುಜಾ ಪೋಷಕರು ಗಂಡ ರಮೇಶ್‌ ಸೇರಿದಂತೆ ಅತ್ತೆ-ಮಾವ, ಅಕ್ಕ-ತಂಗಿ ಸೇರಿದಂತೆ ಒಂಬತ್ತು ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. “ಗಂಡ ಮತ್ತು ಅವರ ಕುಟುಂಬದವರು ಆಗಾಗ ಹಿಂಸೆ ನೀಡುತ್ತಿದ್ದರು, ಕೊನೆಗೆ ಪ್ರಾಣವನ್ನೇ ತೆಗೆದಿದ್ದಾರೆ,” ಎಂದು ಕುಟುಂಬದವರು ಆರೋಪಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow