ಬೆಂಗಳೂರಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ! OC ವಿನಾಯಿತಿ ಕೊಟ್ಟ ರಾಜ್ಯ ಸರ್ಕಾರ!

ಅಕ್ಟೋಬರ್ 15, 2025 - 21:01
 0  12
ಬೆಂಗಳೂರಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ! OC ವಿನಾಯಿತಿ ಕೊಟ್ಟ ರಾಜ್ಯ ಸರ್ಕಾರ!

ಬೆಂಗಳೂರು:  ನಗರಾಭಿವೃದ್ಧಿ ಇಲಾಖೆ ಇಂದು ಬೆಂಗಳೂರಿನ ಬಡವರು ಮತ್ತು ಮಧ್ಯಮ ವರ್ಗದ ಮನೆ ಮಾಲೀಕರಿಗೆ ದೊಡ್ಡ ಸಂತಸದ ಸುದ್ದಿ ನೀಡಿದೆ. ಸಣ್ಣ ವಿಸ್ತೀರ್ಣದ (30x40 ಅಡಿ) ನಿವೇಶನಗಳಲ್ಲಿ ನಿರ್ಮಿಸಿರುವ ಮನೆಗಳಿಗೆ ಈಗಿನಿಂದ ಸ್ವಾಧೀನಾನುಭವ ಪ್ರಮಾಣಪತ್ರ (Occupancy Certificate – OC) ಪಡೆಯುವ ಅಗತ್ಯವಿಲ್ಲ ಎಂಬ ಆದೇಶವನ್ನು ಇಲಾಖೆ ಹೊರಡಿಸಿದೆ.

ಇದಕ್ಕೂ ಮುನ್ನ ಓಸಿ ಇಲ್ಲದ ಕಟ್ಟಡಗಳಿಗೆ ಬೆಸ್ಕಾಂ ಮತ್ತು ಜಲಮಂಡಳಿ ವಿದ್ಯುತ್ ಹಾಗೂ ನೀರಿನ ಸಂಪರ್ಕ ನೀಡುತ್ತಿರಲಿಲ್ಲ. ಆದರೆ ಇದೀಗ ಹೊಸ ಆದೇಶದಂತೆ 30x40 ಸೈಟ್‌ನ ಮೇಲೆ ನಿರ್ಮಾಣಗೊಂಡಿರುವ ನೆಲ + 2 ಅಂತಸ್ತುಗಳ ವಸತಿ ಕಟ್ಟಡಗಳಿಗೆ ಓಸಿ ವಿನಾಯಿತಿ ದೊರೆತಿದೆ. ಈ ತೀರ್ಮಾನದಿಂದ ಲಕ್ಷಾಂತರ ಮನೆಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

ಅಕ್ಟೋಬರ್ 9 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಅದರ ಅನ್ವಯ, ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ವ್ಯಾಪ್ತಿಯೊಳಗಿನ 1200 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ನಿರ್ಮಾಣಗೊಂಡಿರುವ ನೆಲ + 2 ಅಂತಸ್ತು ಅಥವಾ ಸ್ಟಿಲ್ಟ್ (ಬೇಸ್‌ಮೆಂಟ್ ಪಾರ್ಕಿಂಗ್) + 3 ಅಂತಸ್ತುಗಳ ವಸತಿ ಕಟ್ಟಡಗಳಿಗೆ ಓಸಿ ಪಡೆಯುವ ಅಗತ್ಯದಿಂದ ವಿನಾಯಿತಿ ನೀಡಲಾಗಿದೆ.

ಹಿಂದಿನ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಓಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಎಸ್ಕಾಂಗಳು ನಿರಾಕರಿಸಿದ್ದವು. ನಕ್ಷೆ ಮಂಜೂರಾತಿ ಇಲ್ಲದೆ ಓಸಿ ನೀಡಲು ಸಾಧ್ಯವಿಲ್ಲದ ಕಾರಣ ರಾಜ್ಯಾದ್ಯಂತ 3.30 ಲಕ್ಷಕ್ಕೂ ಹೆಚ್ಚು ಕಟ್ಟಡಗಳು ವಿದ್ಯುತ್ ಸಂಪರ್ಕವಿಲ್ಲದೆ ಉಳಿದಿದ್ದವು. ಈಗ ಸರ್ಕಾರವು ಕಾನೂನು ಸಲಹೆ ಪಡೆದು ಈ ಕಟ್ಟಡಗಳಿಗೆ ಸಹಾಯಕವಾಗುವಂತೆ ಓಸಿ ವಿನಾಯಿತಿಯ ಆದೇಶ ಹೊರಡಿಸಿದೆ.

ನಗರಸಭೆ ಅಥವಾ ಮಹಾನಗರ ಪಾಲಿಕೆಗಳಿಂದ ಕಟ್ಟಡಕ್ಕೆ ನೀಡಲಾಗುವ ಸ್ವಾಧೀನಾನುಭವ ಪತ್ರವೇ ಓಸಿ. ಇದು ಕಟ್ಟಡವು ನಕ್ಷೆ ಅನುಮತಿ ಪ್ರಕಾರ ನಿರ್ಮಾಣಗೊಂಡಿದ್ದು ವಾಸಕ್ಕೆ ಸುರಕ್ಷಿತವಾಗಿದೆ ಎಂಬುದನ್ನು ದೃಢಪಡಿಸುತ್ತದೆ. ಈ ಪತ್ರವಿಲ್ಲದೆ ನೀರು, ವಿದ್ಯುತ್, ಒಳಚರಂಡಿ ಸಂಪರ್ಕ ನೀಡಲು ಇಲಾಖೆಗಳು ನಿರಾಕರಿಸುತ್ತಿದ್ದವು. ಹೊಸ ಆದೇಶದಿಂದ ಲಕ್ಷಾಂತರ ಮನೆಮಾಲೀಕರಿಗೆ ಈ ದೀಪಾವಳಿಯು ನಿಜಕ್ಕೂ ಬೆಳಕು ತುಂಬಿದ ಸಂಭ್ರಮದ ಹಬ್ಬವಾಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow