ಮಳೆ ಆರ್ಭಟಕ್ಕೆ ಮಂಗಳೂರು ತತ್ತರ: ಮನೆಗಳ ಮೇಲೆ ಗುಡ್ಡ ಕುಸಿತ, ಬಾಲಕಿ ಸಾವು

ಮಂಗಳೂರು: ಮಂಗಳೂರಿನಲ್ಲಿ ಹಾಗೂ ಉಳ್ಳಾಲ ಪರಿಸರದಲ್ಲಿ ಗುರುವಾರ ತಡರಾತ್ರಿಯಿಂದಲೂ ಧಾರಕಾರ ಮಳೆಯಾಗುತ್ತಿದೆ. ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾರ್, ಅಂಬಿಕಾರಸ್ತೆ, ಕೋಟೆಕಾರು, ತಲಪಾಡಿ, ಪಾವೂರು, ಹರೇಕಳ, ಉಳಿಯ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಮನೆಗಳು, ಕಾರುಗಳು, ಬೈಕ್ಗಳು ಎಲ್ಲವೂ ಮುಳುಗಡೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಅದಲ್ಲದೆ ದೇರಳೆಕಟ್ಟೆಯಲ್ಲಿ ಕಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಬಿದ್ದು ಫಾತಿಮಾ ನಯೀಮ (6) ಎನ್ನುವ ಮಗು ಮೃತಪಟ್ಟಿದೆ. ಮೊದಲಿಗೆ ಗಂಭೀರ ಸ್ಥಿತಿಯಲ್ಲಿದ್ದ ಫಾತಿಮಾ ನಯೀಮಳನ್ನು ರಕ್ಷಣೆ ಮಾಡಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ.
ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವನ್ನು ರಕ್ಷಣೆ ಮಾಡಿದ್ದರು. ಸದ್ಯ ಮೋಂಟೆಪದವು ಬಳಿ ಮೂವರ ರಕ್ಷಣೆಗಾಗಿ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






