ವಿಷ್ಣುವರ್ಧನ್ ಸಮಾಧಿ ತೆರವು: ಮೇರುನಟನಿಗೆ ಅರ್ಧ ಎಕರೆ ಜಾಗ ಇಲ್ವಾ? ನಟ ಕಿಚ್ಚ ಸುದೀಪ್ ಭಾವುಕ
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿ ತೆರವು ವಿಚಾರದಲ್ಲಿ ನಟ ಕಿಚ್ಚ ಸುದೀಪ್ ತಮ್ಮ ಬೇಸರವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.
"ವಿಷ್ಣುವರ್ಧನ್ ಅಂದ್ರೆ ಎಂದಿಗೂ ಮುಗಿಯದ ಅಭಿಮಾನ ಮತ್ತು ಗೌರವ. ಅವರ ಸ್ಮಾರಕವನ್ನು ಒಡೆದು ಹಾಕಿರುವುದು ದೇವಾಲಯವನ್ನೇ ಧ್ವಂಸ ಮಾಡಿದಂತೆ ನೋವುಂಟುಮಾಡಿದೆ," ಎಂದು ಸುದೀಪ್ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಹೈಕೋರ್ಟ್ ಆದೇಶದ ಪ್ರಕಾರ ಸಮಾಧಿ ತೆರವು ಮಾಡಲಾಗಿದೆ ಎಂದು ತಿಳಿದಿದ್ದರೂ, ಸರ್ಕಾರ ಮತ್ತು ಮಂತ್ರಿಗಳ ಮೂಲಕ ಸ್ಮಾರಕ ಉಳಿಸುವ ಹಲವು ಪ್ರಯತ್ನಗಳನ್ನು ಮಾಡಿದ್ದಾಗಿ ಅವರು ಹೇಳಿದ್ದಾರೆ. "ಹಣಕಾಸು ಬೇಕಾದರೂ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಸಿದ್ಧರಿದ್ದೇವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸುದೀಪ್ ಪ್ರಕಾರ, ಹೈಕೋರ್ಟ್ ಈಗಾಗಲೇ ಮೈಸೂರಿನಲ್ಲಿರುವ ಸ್ಮಾರಕವನ್ನು ಅಧಿಕೃತವಾಗಿ ಗುರುತಿಸಿದೆ. ಆದರೆ, ಬೆಂಗಳೂರಿನಂತಹ ನಗರದಲ್ಲಿ ಅಭಿಮಾನಿಗಳು ಪ್ರಾರ್ಥನೆ ಮಾಡಲು, ಗೌರವ ಸಲ್ಲಿಸಲು ಒಂದು ಸ್ಥಳ ಇರಬೇಕೆಂದು ಅವರು ಒತ್ತಿ ಹೇಳಿದ್ದಾರೆ. "ಭೂಮಿ ವ್ಯವಹಾರ ಮನುಷ್ಯನ ಭಾವನೆಗಳಿಗಿಂತ ದೊಡ್ಡದಾಗಬಾರದು" ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಸರ್ಕಾರ, ನ್ಯಾಯಾಲಯ ಹಾಗೂ ಭೂಮಿ ಖರೀದಿದಾರರಿಗೆ ಮನವಿ ಮಾಡಿದ ಸುದೀಪ್ – "ಅಗತ್ಯ ಹಣಕಾಸು ಒದಗಿಸಲು ನಾನು ಮತ್ತು ಲಕ್ಷಾಂತರ ಅಭಿಮಾನಿಗಳು ಸಿದ್ಧ. ಸ್ಮಾರಕ ಮರುಸ್ಥಾಪನೆಗೆ ಅವಕಾಶ ನೀಡಿ" ಎಂದು ವಿನಂತಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?