ಶಿಕ್ಷಕಿ ಮೇಲೆ ಲವ್: ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ..!
ಮಧ್ಯಪ್ರದೇಶ: ತನ್ನ ಪ್ರೀತಿಯನ್ನು ಶಿಕ್ಷಕಿ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಕ್ರೂರ ಕೃತ್ಯ ಎಸಗಿದ್ದಾನೆ. ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದ್ದು, 26 ವರ್ಷದ ಶಿಕ್ಷಕಿಯ ದೇಹದ ಶೇ.30ರಷ್ಟು ಭಾಗ ಸುಟ್ಟಿದೆ. ಗಾಯಗೊಂಡ ಶಿಕ್ಷಕಿ ಜಬಲ್ಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ವಿದ್ಯಾರ್ಥಿ ಸೂರ್ಯಾಂಶ್ ಕೊಚಾರ್ (ಹತ್ತನೇ ತರಗತಿ) ಶಿಕ್ಷಕಿಯ ಮನೆಗೆ ಪೆಟ್ರೋಲ್ ಬಾಟಲಿಯೊಂದಿಗೆ ತೆರಳಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ.
ಪ್ರಾಥಮಿಕ ತನಿಖೆಯ ಪ್ರಕಾರ, ಸೂರ್ಯಾಂಶ್ ಶಿಕ್ಷಕಿಯನ್ನು ಒನ್ಸೈಡೆಡ್ ಪ್ರೀತಿಸುತ್ತಿದ್ದ. ಆಗಸ್ಟ್ 15ರ ಕಾರ್ಯಕ್ರಮಕ್ಕೆ ಶಿಕ್ಷಕಿ ಸೀರೆ ಧರಿಸಿ ಬಂದಾಗ ಅವಳಿಗೆ ಅಸಭ್ಯ ಕಮೆಂಟ್ ಮಾಡಿದ್ದ. ಇದರಿಂದ ಕೋಪಗೊಂಡ ಶಿಕ್ಷಕಿ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ.
ಘಟನೆಯ ಬಳಿಕ ಕೊತ್ವಾಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಡೊಂಗರ್ಗಾಂವ್ ಠಾಣೆ ವ್ಯಾಪ್ತಿಯ ಕಲ್ಯಾಣಪುರ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಸ್ತುತ ಆತ ಬಂಧನದಲ್ಲಿದ್ದು, ಪ್ರಕರಣದ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?