Bengaluru: ಇನ್ಮುಂದೆ ಅಸ್ತಿತ್ವ ಕಳೆದುಕೊಳ್ಳಲಿದೆ BBMP: ಇಂದಿನಿಂದ ‘ಗ್ರೇಟರ್ ಬೆಂಗಳೂರುʼ ಜಾರಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದಿನಿಂದ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಅಂದೇ ಗ್ರೇಟರ್ ಬೆಂಗಳೂರು ಪ್ರದೇಶ ಜಾರಿಯಾಗಲಿದೆ. ಕಳೆದ ನಾಲ್ಕೂವರೇ ವರ್ಷದಿಂದ ಬಿಬಿಎಂಪಿ ಚುನಾವಣೆ ಆಗದೇ ಜನಪ್ರತಿನಿಧಿಗಳು ಇಲ್ಲದೇ ಅಧಿಕಾರಿಗಳ ನೇತೃತ್ವದಲ್ಲಿ ಅಡಳಿತ ನಡೀತಿದೆ. ಈ ಮಧ್ಯೆ ಬಿಬಿಎಂಪಿ ಬದಲಾಗಿ ಗ್ರೇಟರ್ ಬೆಂಗಳೂರು ತರೋದಾಗಿ ಹೇಳಿ ಚುನಾವಣೆ ಮುಂದೂಡಲಾಗಿತ್ತು.
ಸದ್ಯ ಇರುವ ಬಿಬಿಎಂಪಿ ವ್ಯಾಪ್ತಿಯನ್ನೇ ಬಳಸಿಕೊಂಡು ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಪ್ರದೇಶವನ್ನ ಇದೇ ಮೇ 15ರಂದು ಅನುಷ್ಠಾನಕ್ಕೆ ತರಲು ಮುಂದಾಗಿದೆ. ಈಗಾಗಲೇ ರಾಜ್ಯಪಾಲರು ಅಂಕಿತ ಹಾಕಿರುವ ಕಾರಣಕ್ಕೆ ಬಿಬಿಎಂಪಿ ಬದಲಾಗಿ ಜಿಬಿಎ ಕಾರ್ಯ ಶುರು ಮಾಡಲಿದೆ. ಬೆಂಗಳೂರನ್ನು 3 ಅಥವಾ 5 ಪಾಲಿಕೆಗಳನ್ನಾಗಿ ಹೋಳು ಮಾಡಿ, ತಲಾ 125 ವಾರ್ಡ್ ರಚಿಸಲಿದೆ. ಅದಕ್ಕೆ ತಕ್ಕಂತೆ ಬಿಬಿಎಂಪಿ ವ್ಯಾಪ್ತಿಯ ಪ್ರದೇಶವನ್ನು ‘ಗ್ರೇಟರ್ ಬೆಂಗಳೂರು ಪ್ರದೇಶ’ ಎಂದು ಪರಿಗಣಿಸಲು ನಿರ್ಧರಿಸಲಿದೆ.
ಇದಲ್ಲದೇ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ರ ಸೆಕ್ಷನ್ 360 ರೊಂದಿಗೆ ಓದಲಾದ ಸೆಕ್ಷನ್ 7(5) ರ ಅಡಿ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ, ಬಿಬಿಎಂಪಿ ಕಾಯ್ದೆ, 2020 ರ ಅಡಿ ನೀಡಲಾದ ಅಧಿಕಾರಗಳು ಮತ್ತು ಕರ್ತವ್ಯಗಳನ್ನು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 ರ ನಿಬಂಧನೆಗಳ ಅಡಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಆಯಾ ಕಾರ್ಯಕಾರಿಗಳು ಚಲಾಯಿಸುವುದನ್ನು ಮುಂದುವರಿಸುತ್ತಾರೆ" ಎಂದು ಅದು ಹೇಳಿದೆ.
ಬಿಜೆಪಿಯ ವಿರೋಧದ ಹೊರತಾಗಿಯೂ ಇತ್ತೀಚೆಗೆ ರಾಜ್ಯ ವಿಧಾನಮಂಡಲದ ಎರಡೂ ಸದನಗಳು ಅಂಗೀಕರಿಸಿದ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಗರಿಷ್ಠ ಏಳು ಮಹಾನಗರ ಪಾಲಿಕೆಗಳಾಗಿ ವಿಭಜಿಸುವ ಮೂಲಕ ಪುನರ್ರಚಿಸುವ ಪ್ರಸ್ತಾಪವನ್ನು ಹೊಂದಿದೆ.
ಇದು ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆ ಮತ್ತು ಮೇಯರ್ ಮತ್ತು ಉಪ ಮೇಯರ್‌ಗೆ 30 ತಿಂಗಳ ಅವಧಿಯನ್ನು ಇದು ನೀಡಲಿದೆ.
ಜಿಬಿಎಗೆ ಮುಖ್ಯಮಂತ್ರಿಗಳು ಎಕ್ಸ್- ಆಫಿಸಿಯೊ ಅಧ್ಯಕ್ಷರಾಗಿ ನೇತೃತ್ವ ವಹಿಸಲಿದ್ದಾರೆ. ಬೆಂಗಳೂರಿನ ಅಭಿವೃದ್ಧಿ ಉಸ್ತುವಾರಿ ಹೊಂದಿರುವ ಸಚಿವರು ಎಕ್ಸ್-ಆಫಿಸಿಯೊ ಉಪಾಧ್ಯಕ್ಷರಾಗಿರುತ್ತಾರೆ.
ನಿಮ್ಮ ಪ್ರತಿಕ್ರಿಯೆ ಏನು?






