Bike Taxi Service: ಓಲಾ, ರ‍್ಯಾಪಿಡೋ ಸೇರಿ ಎಲ್ಲಾ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಕ್ಕೆ ರಾಜ್ಯ ಸರ್ಕಾರ ಆದೇಶ..!

2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಅನೇಕ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯನ್ನು ತಪ್ಪಿಸಲಾರಂಭಿಸಿದ್ದರಿಂದ ಬೆಂಗಳೂರಿನಾದ್ಯಂತ ಬೈಕ್ ಟ್ಯಾಕ್ಸಿಗಳು ಜನಪ್ರಿಯತೆಯನ್ನು ಗಳಿಸಿದವು.
ಕಾಲಾನಂತರದಲ್ಲಿ, ಅವುಗಳ ಕೈಗೆಟುಕುವಿಕೆ ಮತ್ತು ಅನುಕೂಲತೆಯು ಅವುಗಳನ್ನು ಆದ್ಯತೆಯ ಸಾರಿಗೆ ವಿಧಾನವನ್ನಾಗಿ ಮಾಡಿತು, ವಿಶೇಷವಾಗಿ ಸಣ್ಣ ಪ್ರಯಾಣಗಳಿಗೆ. ಇಂದು, ನಗರದಲ್ಲಿ 75,000 ರಿಂದ 1 ಲಕ್ಷ ಬೈಕ್-ಟ್ಯಾಕ್ಸಿ ಸವಾರರು ವಿವಿಧ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಸಂಪರ್ಕ ಹೊಂದಿದ್ದಾರೆಂದು ಅಂದಾಜಿಸಲಾಗಿದೆ.
ಆದ್ರೆ ಇದೀಗ ಹೈಕೋರ್ಟ್‌ನ ಆದೇಶದ ಅನುಸಾರ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆದೇಶಿಸಿದ್ದಾರೆ.
ಈ ಬಗ್ಗೆ ಸಾರಿಗೆ ಇಲಾಖೆಯ ಕಾರ್ಯದರ್ಶಿ ಮತ್ತು ಸಾರಿಗೆ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದ್ದು, ಹೈಕೋರ್ಟ್ ಆದೇಶ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಆ ಮೂಲಕ ರಾಜ್ಯದ ಆಟೋ ಮತ್ತು ಕ್ಯಾಬ್ ಚಾಲಕರ ಹಲವಾರು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ.
ಮೋಟಾರ್ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು 2022 ರಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ಏಪ್ರಿಲ್ – 2 ರಂದು ಆರು ವಾರದೊಳಗೆ ಬೈಕ್ ಟ್ಯಾಕ್ಸಿ ನಿಲ್ಲಿಸುವಂತೆ ಆದೇಶ ನೀಡಿತ್ತು.
1988 ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 93 ರ ಅಡಿಯಲ್ಲಿ ಅಗತ್ಯ ನಿಯಮಗಳೊಂದಿಗೆ ಸಂಬಂಧಿತ ಮಾರ್ಗಸೂಚಿಗಳನ್ನು ತಿಳಿಸದ ಹೊರತು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆರು ವಾರಗಳ ಒಳಗೆ ಎಲ್ಲಾ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳು ಸ್ಥಗಿತಗೊಳ್ಳುವಂತೆ ನೋಡಿಕೊಳ್ಳಲು ನ್ಯಾಯಾಲಯ ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿತ್ತು.
ಸಚಿವ ರಾಮಲಿಂಗಾ ರೆಡ್ಡಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದರು. ಅಗತ್ಯ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಅಪ್ಲಿಕೇಶನ್ ಆಧಾರಿತ ಪ್ಲಾಟ್‌ಫಾರ್ಮ್‌ಗಳಿಗೆ ನಿಯಮಗಳ ಕೊರತೆಯೂ ಬಳಕೆದಾರರಲ್ಲಿ ಅಸುರಕ್ಷತೆ ಹೆಚ್ಚಿಸಿದೆ ಎಂದು ಹೇಳಿದ್ದರು.
ಸದ್ಯ ಹೈಕೋರ್ಟ್ ಆದೇಶ ಕಾರ್ಯಾಗತಗೊಳಿಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಆರು ವಾರಗಳ ನಂತರ ಬೈಕ್ ಟ್ಯಾಕ್ಸಿ ವಿರುದ್ಧ ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ನಿನ್ನೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟವು ಬೈಕ್ ಟ್ಯಾಕ್ಸಿಗಳನ್ನು ನಿಲ್ಲಿಸುವಂತೆ ಆದೇಶ ಮಾಡಲು ಸಚಿವ ರಾಮಲಿಂಗಾರೆಡ್ಡಿಗೆ ಮನವಿ ಮಾಡಲಾಗಿತ್ತು.
ನಿಮ್ಮ ಪ್ರತಿಕ್ರಿಯೆ ಏನು?






