Champions Trophy 2025: ಟೂರ್ನಿಯಿಂದ ಹಿಂದೆ ಉಳಿಯುತ್ತಾ ಪಾಕಿಸ್ತಾನ್!?

ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ್ ಹಿಂದೆ ಸರಿಯುವ ಸಾಧ್ಯತೆ ಇದೆ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂದು ಈಗಾಗಲೇ ಬಿಸಿಸಿಐ ಸ್ಪಷ್ಟಪಡಿಸಿದೆ. ಈ ವಿಷಯವನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪಾಕ್ ಸರ್ಕಾರದ ಮುಂದೆ ಪ್ರಸ್ತಾಪಿಸಿದೆ.
ಇದೇ ವೇಳೆ ಪಾಕ್ ಸರ್ಕಾರ ಟೂರ್ನಿಯಿಂದ ಹಿಂದೆ ಸರಿಯುವ ಬಗ್ಗೆ ಪಿಸಿಬಿ ಜೊತೆ ಚರ್ಚಿಸಿದೆ. ಹೀಗಾಗಿ ಭಾರತವು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದರೆ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಲು ಪಾಕ್ ಸರ್ಕಾರ ಸೂಚಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹೀಗಾಗಿ ಭಾರತದ ವಿಷಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಂದಿನ ನಡೆಯೇನು ಎಂಬುದನ್ನು ಕಾದು ನೋಡಲು ಪಾಕ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಅತ್ತ ಐಸಿಸಿ ಭಾರತದ ಪರ ನಿಲ್ಲುವ ಸಾಧ್ಯತೆ ಹೆಚ್ಚು. ಅಲ್ಲದೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಸೂಚಿಸುವ ಸಾಧ್ಯತೆಯಿದೆ.
ಐಸಿಸಿಯ ಈ ನಿರ್ಧಾರವು ಅಧಕೃತವಾದರೆ, ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ವಿಷಯದಲ್ಲಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರ ತಿಳಿಸುವ ಸಾಧ್ಯತೆಯಿದೆ. ಅಲ್ಲದೆ ಟೂರ್ನಿಯನ್ನು ಬಹಿಷ್ಕರಿಸಿ ಪಾಕಿಸ್ತಾನ್ ಹೊರಗುಳಿಯಬಹುದು.
ಒಂದು ವೇಳೆ ಪಾಕಿಸ್ತಾನ್ ತಂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದರೆ, ಬೇರೊಂದು ದೇಶಕ್ಕೆ ಆತಿಥ್ಯದ ಹಕ್ಕು ದೊರೆಯಲಿದೆ. ಇಲ್ಲಿ 2023 ರ ಏಕದಿನ ವಿಶ್ವಕಪ್ ಅನ್ನು ಭಾರತ ಯಶಸ್ವಿಯಾಗಿ ಆಯೋಜಿಸಿರುವ ಕಾರಣ, ಈ ಆತಿಥ್ಯದ ಹಕ್ಕು ಬಿಸಿಸಿಐ ಪಾಲಾಗುವ ಸಾಧ್ಯತೆ ಹೆಚ್ಚು. ಏಕೆಂದರೆ ಭಾರತದ ಎಲ್ಲಾ ಸ್ಟೇಡಿಯಂಗಳನ್ನು ಕಳೆದ ವರ್ಷವಷ್ಟೇ ನವೀಕರಿಸಲಾಗಿದೆ. ಹೀಗಾಗಿ ದಿಢೀರ್ ಬದಲಾವಣೆಯಿಂದ ಐಸಿಸಿಯ ಮುಂದಿನ ಆಯ್ಕೆ ಭಾರತ ಆಗಿರಲಿದೆ.
ಪಾಕಿಸ್ತಾನ್ ಚಾಂಪಿಯನ್ಸ್ ಟ್ರೋಫಿ ಆಯೋಜಿಸಬೇಕಿದ್ದರೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ನಡೆಸಲೇಬೇಕು. ಹೈಬ್ರಿಡ್ ಮಾದರಿ ಎಂದರೆ, ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಪಾಕಿಸ್ತಾನದಲ್ಲೇ ಆಯೋಜನೆಗೊಂಡರೂ, ಟೀಮ್ ಇಂಡಿಯಾದ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ನಡೆಯಲಿದೆ. ಅದರಂತೆ ಭಾರತದ ಪಂದ್ಯಗಳಿಗೆ ಯುಎಇ ಅಥವಾ ಶ್ರೀಲಂಕಾ ಆತಿಥ್ಯವಹಿಸುವ ಸಾಧ್ಯತೆ ದಟ್ಟವಾಗಿದೆ
ನಿಮ್ಮ ಪ್ರತಿಕ್ರಿಯೆ ಏನು?






