DC vs RCB, IPL 2025: ಇದು ನನ್ನ ಮೈದಾನ: ಕೆಎಲ್ ರಾಹುಲ್‌ʼಗೆ ವಿರಾಟ್ ಕೊಹ್ಲಿ ತಿರುಗೇಟು

ಎಪ್ರಿಲ್ 28, 2025 - 10:31
 0  19
DC vs RCB, IPL 2025: ಇದು ನನ್ನ ಮೈದಾನ: ಕೆಎಲ್ ರಾಹುಲ್‌ʼಗೆ ವಿರಾಟ್ ಕೊಹ್ಲಿ ತಿರುಗೇಟು

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್​ ಅನ್ನು 6 ವಿಕೆಟ್​ಗಳಿಂದ ಸೋಲಿಸಿದೆ. ಆ ಮೂಲಕ ಚಿನ್ನಸ್ವಾಮಿಯಲ್ಲಿ ಆಗಿದ್ದ ಸೋಲಿನ ಸೇಡನ್ನು ತೀರಿಸಿಕೊಂಡಿದೆ.

ಟಾಸ್​ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ಗೆ ಆರ್​ಸಿಬಿ ಬೌಲರ್ಸ್​, ಚಮಕ್ ಕೊಟ್ಟರು. ನಿಗಧಿತ ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್, 162 ರನ್​​ಗಳಿಸಿತ್ತು. ಆರ್​ಸಿಬಿ ಪರ ಭವಿ ಮೂರು ವಿಕೆಟ್ ಪಡೆದರು. ಇನ್ನು ಹೇಜಲ್​ವುಡ್ 2, ಯಶ್ ದಯಾಳ್, ಕೃನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು 163 ರನ್​ಗಳ ಗುರಿಯನ್ನು ಬೆನ್ನು ಹತ್ತಿದ್ದ ಆರ್​ಸಿಬಿ, ಕೇವಲ 4 ವಿಕೆಟ್​ ಕಳೆದುಕೊಂಡು 18.3 ಓವರ್​ನಲ್ಲಿ ಗುರಿ ಮುಟ್ಟಿತು. ಆರ್​ಸಿಬಿ ಪರ ವಿರಾಟ್ ಕೊಹ್ಲಿ 47 ಬಾಲ್​ನಲ್ಲಿ 51 ರನ್​ಗಳಿಸಿದರು. ಇನ್ನು, ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೃನಾಲ್ ಪಾಂಡ್ಯ 47 ಬಾಲ್​ನಲ್ಲಿ 73 ರನ್​​ ಚಚ್ಚಿದರು.

ಈ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ ಅವರ ಕಾಲೆಳೆದಿದ್ದಾರೆ. ಪಂದ್ಯದ ಬಳಿಕ ಭೇಟಿಯಾದ ಕೆಎಲ್ ರಾಹುಲ್ ಮುಂದೆ ಇದು ನನ್ನ ಮೈದಾನ ಎಂಬ ಸೆಲೆಬ್ರೇಷನ್ ತೋರಿಸುವ ಮೂಲಕ  ಕೊಹ್ಲಿ ಕಿಚಾಯಿಸಿದ್ದಾರೆ.

ಈ ವೇಳೆ ರಾಹುಲ್ ಹೌದು, ನಿಮ್ಮದೇ ಮೈದಾನ ಎಂದು ಪೆವಿಲಿಯನ್ ಮೇಲಿರುವ ಕೊಹ್ಲಿಯ ಹೆಸರನ್ನು ತೋರಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.  ರಾಹುಲ್ ಅವರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ನಗುತ್ತಾ ಕೊಹ್ಲಿ ತಬ್ಬಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ಪಡೆದುಕೊಂಡಿದ್ದಾರೆ.

ಅಂದಹಾಗೆ ಏಪ್ರಿಲ್ 10 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಕೆಎಲ್ ರಾಹುಲ್ ಕಾಂತಾರಾ ಸಿನಿಮಾ ಶೈಲಿಯಲ್ಲಿ ವೃತ್ತ ಎಳೆದು ಇದು ನನ್ನ ಮೈದಾನ ಎಂದು ಸಂಭ್ರಮಿಸಿದ್ದರು. ಇದಕ್ಕೆ ಪ್ರತಿಯಾಗಿ ಇದೀಗ ವಿರಾಟ್ ಕೊಹ್ಲಿ ಇದು ನನ್ನ ಮೈದಾನ ಎಂದು ಕೆಎಲ್ ರಾಹುಲ್ ಅವರ ಕಾಲೆಳೆದಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow