GST ಪರಿಷ್ಕರಣೆ: ದೇಶದ ಆರ್ಥಿಕತೆ ಬಲ ಪಡಿಸುವುದು ನಮ್ಮ ಉದ್ದೇಶ - ಪ್ರಧಾನಿ ಮೋದಿ
ನವದೆಹಲಿ: ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಹೊಸ ಜಿಎಸ್ಟಿ ದರಗಳ ಕುರಿತು ತೆಗೆದುಕೊಂಡ ನಿರ್ಧಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಜಿಎಸ್ಟಿಗೆ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ತರಲು ಉದ್ದೇಶಿಸಿರುವುದಾಗಿ ಉಲ್ಲೇಖಿಸಿದ್ದ ಮೋದಿ, ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸುವುದು ಹಾಗೂ ದೇಶದ ಆರ್ಥಿಕತೆಯನ್ನು ಬಲಪಡಿಸುವುದು ಮುಖ್ಯ ಗುರಿಯಾಗಿದೆ ಎಂದರು.
ರೈತರು, ಸಣ್ಣ ಮತ್ತು ಮಧ್ಯಮ ವರ್ಗದವರು, ಮಹಿಳೆಯರು ಹಾಗೂ ಯುವಕರು ಈ ನಿರ್ಧಾರಗಳಿಂದ ನೇರ ಪ್ರಯೋಜನ ಪಡೆಯಲಿದ್ದಾರೆ ಎಂದು ಪ್ರಧಾನಿ ಹೇಳಿದರು. ಸಣ್ಣ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ವ್ಯಾಪಾರ ಮಾಡಲು ಸುಲಭವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ತೆರಿಗೆ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಈ ಸುಧಾರಣೆಗಳ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಜತೆಗೆ, ಮುಂದಿನ ಪೀಳಿಗೆಯ ಸುಧಾರಣೆಗಳು ಮತ್ತು ಜಿಎಸ್ಟಿ ಕಾನೂನು ತಿದ್ದುಪಡಿಗಳಿಗಾಗಿ ಕಾರ್ಯಪಡೆ ರಚಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಅವರು ಸೆಮಿಕಂಡಕ್ಟರ್ಗಳಿಂದ ರಸಗೊಬ್ಬರಗಳವರೆಗೆ ಅನೇಕ ಕ್ಷೇತ್ರಗಳಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವತ್ತ ಸರ್ಕಾರ ಗಮನ ಹರಿಸಿದೆ ಎಂದು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?