IND vs PAK: ಪಾಕ್ ಪಡೆಯನ್ನು ಸೋಲಿಸಿದ ಟೀಮ್ ಇಂಡಿಯಾ: 9ನೇ ಬಾರಿಗೆ ಏಷ್ಯಾಕಪ್ ಎತ್ತಿಹಿಡಿದ ಭಾರತ

ಸೆಪ್ಟೆಂಬರ್ 29, 2025 - 08:04
 0  24
IND vs PAK: ಪಾಕ್ ಪಡೆಯನ್ನು ಸೋಲಿಸಿದ ಟೀಮ್ ಇಂಡಿಯಾ: 9ನೇ ಬಾರಿಗೆ ಏಷ್ಯಾಕಪ್ ಎತ್ತಿಹಿಡಿದ ಭಾರತ

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಏಷ್ಯಾಕಪ್ 2025ರ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿ ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಭಾರತ–ಪಾಕಿಸ್ತಾನ ಫೈನಲ್ ಇದೇ ಮೊದಲು ನಡೆದಿತ್ತು. ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ಗಳಿಂದ ಗೆದ್ದು ದಾಖಲೆಯ 9ನೇ ಬಾರಿ ಟ್ರೋಫಿಯನ್ನು ಎತ್ತಿಹಿಡಿಯಿತು.

ಪಾಕಿಸ್ತಾನಕ್ಕೆ ಉತ್ತಮ ಆರಂಭ

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಸಾಹಿಬ್‌ಜಾದಾ ಫರ್ಹಾನ್ (57) ಮತ್ತು ಫಖರ್ ಜಮಾನ್ ಅವರ ಉತ್ತಮ ಆರಂಭದಿಂದ ಬಲಿಷ್ಠ ಸ್ಥಿತಿಗೆ ತಲುಪಿತು. ಇವರಿಬ್ಬರು ಮೊದಲ ವಿಕೆಟ್‌ಗೆ 84 ರನ್‌ಗಳ ಪಾಲುದಾರಿಕೆಯನ್ನು ನೀಡಿದರು. ಆದರೆ ಬಳಿಕ ಕುಲ್ದೀಪ್ ಯಾದವ್‌ ಅವರ ಚುರುಕು ಬೌಲಿಂಗ್‌ನಿಂದ ಪಾಕಿಸ್ತಾನ ಸಂಪೂರ್ಣ ಕುಸಿಯಿತು. ಅವರು ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಕಿತ್ತುಕೊಂಡರು. ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ಬುಮ್ರಾ ತಲಾ ಎರಡು ವಿಕೆಟ್‌ಗಳೊಂದಿಗೆ ಪಾಕಿಸ್ತಾನ 19.1 ಓವರ್‌ಗಳಲ್ಲಿ 146ಕ್ಕೆ ಆಲೌಟ್ ಆಯಿತು.

ಭಾರತದ ಆರಂಭಿಕ ಪತನ

146 ರನ್ ಗುರಿ ಬೆನ್ನಟ್ಟಿದ ಭಾರತ, ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಶುಭ್‌ಮನ್ ಗಿಲ್ ಬೇಗನೆ ಔಟಾಗಿ ಕೇವಲ 20 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ 57 ರನ್‌ಗಳ ಪ್ರಮುಖ ಜೋಡಿಯನ್ನು ಕಟ್ಟಿದರು.

ಗೆಲುವಿನ ಹಾದಿ – ತಿಲಕ್ ಮತ್ತು ದುಬೆ

ಸ್ಯಾಮ್ಸನ್ ಔಟಾದ ನಂತರ ಬಂದ ಶಿವಂ ದುಬೆ, ತಿಲಕ್ ವರ್ಮಾಗೆ ಬೆಂಬಲ ನೀಡುತ್ತಾ 60 ರನ್‌ಗಳ ವೇಗದ ಜೋಡಿಯನ್ನು ಕಟ್ಟಿದರು. ತಿಲಕ್ ಹೋರಾಟದ ಅರ್ಧಶತಕ ಬಾರಿಸಿದರು. ಅಂತಿಮ ಹಂತದಲ್ಲಿ ದುಬೆ ಔಟಾದರೂ, ಕೊನೆಯ ಓವರ್‌ನಲ್ಲಿ ತಿಲಕ್ ಸಿಕ್ಸರ್ ಹೊಡೆದು ಒತ್ತಡ ಕಡಿಮೆ ಮಾಡಿದರು. ನಂತರ ರಿಂಕು ಸಿಂಗ್ ಬೌಂಡರಿ ಬಾರಿಸಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow