IPL 2025: ಕೇವಲ 14ನೇ ವಯಸ್ಸಿನಲ್ಲೇ IPLನಲ್ಲಿ ಮೊದಲ ಶತಕ: ಯಾರು ಈ ವೈಭವ್ ಸೂರ್ಯವಂಶಿ?

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೀಗೆ ಹೊಸ ಇತಿಹಾಸ ನಿರ್ಮಿಸಿದ್ದು 14 ವರ್ಷದ ವೈಭವ್ ಸೂರ್ಯವಂಶಿ, ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವೈಭವ್ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.
ಈ ಶತಕದೊಂದಿಗೆ ಐಪಿಎಲ್ ಇತಿಹಾಸದಲ್ಲೇ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಟಿ20 ಕ್ರಿಕೆಟ್ನಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.
ಈ ಬಾರಿ ನಡೆದ ಮೆಗಾ ಹರಾಜಿನಲ್ಲಿ ವೈಭವ್ ದುಪ್ಪಟ್ಟು ಬೆಲೆಗೆ ಮಾರಾಟವಾಗಿದ್ದಾರೆ. ಅಲ್ಲದೇ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹರಾಜು ಸಂದರ್ಭದಲ್ಲಿ ವೈಭವ್ಗೆ 13 ವರ್ಷ ತುಂಬಿತ್ತು. ವೈಭವ್ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಜಿದ್ದಿಗೆ ಬಿದ್ದಿದ್ದವು. ಕೊನೆಯಲ್ಲಿ ಆರ್ಆರ್ ಬಿಡ್ಡಿಂಗ್ ಗೆದ್ದುಕೊಂಡಿತ್ತು.
ದೆಹಲಿ ತಂಡ ಕೊನೆಯದಾಗಿ 1 ಕೋಟಿ ರೂಪಾಯಿ ಬಿಡ್ ಮಾಡ್ತಿರೋದಾಗಿ ಹೇಳಿತು. ಆದರೆ ರಾಜಸ್ಥಾನ 1.10 ಕೋಟಿ ನೀಡಿ ಖರೀದಿ ಮಾಡಿತ್ತು. ಸೂರ್ಯವಂಶಿ ಪ್ರತಿಭೆಯನ್ನು ಗುರುತಿಸಿದ್ದ ಹೆಡ್ಕೋಚ್ ರಾಹುಲ್ ದ್ರಾವಿಡ್, ಕೊನೆಗೂ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ದ್ರಾವಿಡ್ ನಂಬಿಕೆಗೆ ವೈಭವ್, ಇಂದು ನ್ಯಾಯ ಒದಗಿಸಿದ್ದಾರೆ.
ವೈಭವ್ ಮೂಲತಃ ಬಿಹಾರದ ಸಮಸ್ತಿಪುರದವರು. 12ನೇ ವಯಸ್ಸಿನಲ್ಲಿ ಅಂದರೆ 2023ರಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದಾರೆ. ಇದೀಗ ಐಪಿಎಲ್ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಅಂಡರ್-19 ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವೈಭವ್ ಸ್ಫೋಟಕ ಪ್ರದರ್ಶನ ನೀಡಿದ್ದಾರೆ. ಅಂಡರ್-19 ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಆಕರ್ಷಕ ಶತಕ ಬಾರಿಸಿದ್ದರು. ಕೇವಲ 62 ಬಾಲ್ನಲ್ಲಿ 104 ರನ್ಗಳಿಸಿ ಗಮನ ಸೆಳೆದಿದ್ದಾರೆ. 2005ರಲ್ಲಿ ಇಂಗ್ಲೆಂಡ್ ಆಟಗಾರ ಮೊಯಿನ್ ಅಲಿ 58 ಬಾಲ್ನಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು. ಅವರನ್ನು ಬಿಟ್ಟರೆ, ಇದೀಗ ವೈಭವ್ ಆ ಸಾಧನೆ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






