IPL 2025: ಕೊನೆಗೂ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ ಹೇಳಿದ್ದೇನು..?

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಗೂ ತನ್ನ ಸೋಲಿನ ಸರಣಿಯನ್ನು ಮುರಿದಿದೆ. ಸತತ ಐದು ಪಂದ್ಯಗಳಲ್ಲಿ ಸೋತ ನಂತರ, ಚೆನ್ನೈ ತಂಡವು ಈ ಸೀಸನ್ನಲ್ಲಿ ಎರಡನೇ ಗೆಲುವು ದಾಖಲಿಸಿತು. ಲಕ್ನೋ ನೀಡಿದ 167 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ ಕೊನೆಯ ಓವರ್ನಲ್ಲಿ ಗುರಿ ಸಾಧಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನಲ್ಲಿ ಎಂಎಸ್ ಧೋನಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು.
ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ಗೆ ಬಂದ ಧೋನಿ 11 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿದರು. ಅವರ ಬ್ಯಾಟ್ನಿಂದ 4 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಯಿತು. ಅವರನ್ನು ಹೊರತುಪಡಿಸಿ, ಶಿವಂ ದುಬೆ 37 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದರು. ರಚಿನ್ ರವೀಂದ್ರ 37 ರನ್ ಮತ್ತು ಶೇಖ್ ರಶೀದ್ 27 ರನ್ಗಳ ಕಾಣಿಕೆ ನೀಡಿದರು.
ಇನ್ನೂ ಈ ಗೆಲುವಿನ ಬಳಿಕ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ಈ ಗೆಲುವು ಖುಷಿ ಕೊಟ್ಟಿದೆ. ದುರದೃಷ್ಟವಶಾತ್ ನಾವು ಕೊನೆಯ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಈ ಗೆಲುವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದು ಕಠಿಣ ಪಂದ್ಯವಾಗಿತ್ತು ಮತ್ತು ಗೆದ್ದಿದ್ದಕ್ಕೆ ನನಗೆ ಸಂತೋಷವಾಗಿದೆ. ಅಲ್ಲದೆ ಈ ಜಯದೊಂದಿಗೆ ತಂಡವು ಲಯವನ್ನು ಮರಳುತ್ತದೆ ಎಂಬ ವಿಶ್ವಾಸವಿದೆ ಎಂದರು.
ಇನ್ನು ಈ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ತವರು ಮೈದಾನವಾದ ಚೆಪಾಕ್ ಕ್ರೀಡಾಂಗಣದಲ್ಲಿ ಮೂರು ಸೋಲುಗಳನ್ನು ಅನುಭವಿಸಿದೆ. ತಂಡದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ತವರಿನ ಉತ್ತಮ ಪ್ರದರ್ಶನ ನಿಡಲು ಪರದಾಡುತ್ತಿದ್ದಾರೆ.
ಈ ಬಗ್ಗೆ ಕೇಳಿದಾಗ, ಹಿಂದಿನ ಪಂದ್ಯಗಳಲ್ಲಿ, ನಾವು ಮೊದಲ ಆರು ಓವರ್‌ಗಳಲ್ಲಿ ಬೌಲಿಂಗ್ ಮಾಡುವಾಗ ಕಷ್ಟಪಟ್ಟ್ಟಿರುವುದು ನಿಜ. ಆದರೆ ಮಧ್ಯದ ಓವರ್‌ಗಳಲ್ಲಿ ಮತ್ತೆ ಕಂಬ್ಯಾಕ್ ಮಾಡಿದ್ದೆವು. ಬ್ಯಾಟರ್ಗಳು ಸಹ, ನಾವು ಬಯಸಿದ ಆರಂಭವನ್ನು ಪಡೆಯುತ್ತಿರಲಿಲ್ಲ. ನಾವು ಅಂದುಕೊಂಡಂತೆ ಏನೂ ಸಹ ನಡೆಯುತ್ತಿರಲಿಲ್ಲ. ಅದಕ್ಕೆ ಗೆಲುವು ನಮ್ಮದಾಗಿರಲಿಲ್ಲ. ಬಹುಶಃ ಚೆನ್ನೈ ಪಿಚ್ ಇದಕ್ಕೆ ಕಾರಣ ಇರಬಹುದು. ಭವಿಷ್ಯದಲ್ಲಿ ನಾವು ಉತ್ತಮ ವಿಕೆಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಎಂಬ ನಂಬಿಕೆಯಿದೆ ಎಂದು ಧೋನಿ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






