IPL 2025: CSK ವಿರುದ್ಧ ಭರ್ಜರಿ ಗೆಲುವು ಸಾಧಿಸಿದ RCB: ವಿಜಯ್ ಮಲ್ಯ ಹೇಳಿದ್ದೇನು..?

ಇಂಡಿಯನ್ ಪ್ರೀಮಿಯರ್ ಲೀಗ್ನ 8ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ ಪಡೆಯನ್ನು 50 ರನ್ಗಳಿಂದ ಸೋಲಿಸಿದೆ. ಬರೋಬ್ಬರಿ 17 ವರ್ಷಗಳಿಂದ ಅಂದರೆ 6155 ದಿನಗಳಿಂದ ಸಿಎಸ್ಕೆ ತಂಡವನ್ನು ಅವರ ತವರು ನೆಲದಲ್ಲಿ ಸೋಲಿಸಲು ಹೆಣಗಾಡುತ್ತಿದ್ದ ಆರ್‌ಸಿಬಿ, ಏಕಪಕ್ಷೀಯ ಗೆಲುವು ದಾಖಲಿಸುವ ಮೂಲಕ ತನ್ನ ಬಹು ವರ್ಷಗಳ ಬರವನ್ನು ನೀಗಿಸಿಕೊಂಡಿದೆ.
ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಉದ್ಯಮಿ ವಿಜಯ್ ಮಲ್ಯಾ ಅಭಿನಂದನೆ ಸಲ್ಲಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಮಲ್ಯಾ, 18 ವರ್ಷಗಳ ನಂತರ ಚೆಪಾಕ್ ಕೋಟೆಯಲ್ಲಿ ದಕ್ಷಿಣದ ಎದುರಾಳಿ ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಕ್ಕಾಗಿ ಆರ್‌ಸಿಬಿಗೆ ಅಭಿನಂದನೆಗಳು. ಬ್ಯಾಟಿಂಗ್ ಮತ್ತು ಬೌಲ್‌ನಲ್ಲಿ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ. ಧೈರ್ಯಶಾಲಿ ಹುಡುಗರೇ, ಇನ್ನೂ ಚೆನ್ನಾಗಿ ಆಟವಾಡಿ ಎಂದು ಶುಭಾಶಯ ತಿಳಿಸಿದ್ದಾರೆ.
ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ ಜಯಗಳಿಸಿದಾಗಲೂ ವಿಜಯ್ ಮಲ್ಯಾ ಅಭಿನಂದನೆ ತಿಳಿಸಿದ್ದರು. ಐಪಿಎಲ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಕೊನೆಗೂ 17 ವರ್ಷಗಳ ಬಳಿಕ ಚೆನ್ನೈ ನೆಲದಲ್ಲಿ ಆರ್‌ಸಿಬಿ ಗೆದ್ದು ಬೀಗಿದೆ. ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ನಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






