Karnataka Weather: ಬೆಂಗಳೂರಿಗರನ್ನು ಗಡ ಗಡ ನಡುಗಿಸುತ್ತಿರುವ ಚಳಿ: ಮುಂದಿನ ವಾರ ಇನ್ನಷ್ಟು ಏರಿಕೆ!

ಬೆಂಗಳೂರಿನಲ್ಲಿ ಚಳಿ ಮತ್ತಷ್ಟು ಹೆಚ್ಚಾಗಲಿದೆ. ರಾಜ್ಯದಲ್ಲಿ ಇದಕ್ಕಿಂತ ಇನ್ಮುಂದೆ ಚಳಿ ಹೆಚ್ಚಿರುತ್ತೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಲ್ಲಿ ಬೆಳಗ್ಗೆ ತುಂಬಾ ಚಳಿ ಇರಲಿದೆ. ಮಧ್ಯಾಹ್ನ ಹೊರಗೆ ಬಿಸಿಲಿದ್ರೂ, ಥಂಡಿ ವಾತಾವರಣ ಉಂಟಾಗಲಿದೆ. ಮೋಡ ಕವಿದ ವಾತಾವರಣವೂ ಇರುವ ಸಾಧ್ಯತೆ ಇದೆ.
ಹೌದು ಉತ್ತರ ಭಾರತದಿಂದ ಬೀಸುತ್ತಿರುವ ಶೀತಗಾಳಿ ಪ್ರಭಾವದಿಂದ ನಗರದಲ್ಲಿ ತಾಪಮಾನ ಮತ್ತಷ್ಟು ತಗ್ಗುವ ಮುನ್ಸೂಚನೆ ಇದದ್ದು, ಜನವರಿ ತಿಂಗಳ ಸರಾಸರಿ ಕನಿಷ್ಠ ತಾಪಮಾನವ 15.8 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ವಾರ ಕನಿಷ್ಠ ತಾಪಮಾನ 10 ರಿಂದ 12 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗುವ ಮುನ್ಸೂಚನೆ ಕೂಡ ಇರುವುದರಿಂದ ಬೆಂಗಳೂರಿನಲ್ಲಿ ಚಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿಗಾಲ ತುಸು ಹೆಚ್ಚಿರಲಿದ್ದು, ಮಳೆ ಜಾಸ್ತಿ ಬಿದ್ದ ಕಾರಣ ಕೆರೆ, ನದಿ, ಅಣೆಕಟ್ಟುಗಳು ತುಂಬಿರುವುದು ಕೂಡ ವಾತಾವರಣದ ಚಳಿ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗುತ್ತಿದೆ.
ಚಳಿಯ ಜೊತೆಗೆ ಇಬ್ಬನಿ ಕೂಡ ಹೆಚ್ಚಾಗುವ ನಿರೀಕ್ಷೆ ಇದ್ದು, ಬೆಂಗಳೂರು ನಗರವಾಸಿಗಳು ಆರೋಗ್ಯದ ಬಗ್ಗೆ ಕೂಡ ಕಾಳಜಿವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಚಳಿ ಹೆಚ್ಚಿರುವಾಗ ದಪ್ಪನೆಯ ಹೊದಿಕೆ, ಸ್ವೆಟರ್ ಧರಿಸುವುದು ಉತ್ತಮ. ಈಗಿನ ವಾತಾವರಣದಲ್ಲಿ ನೆಗಡಿ, ಕೆಮ್ಮಿನಂತಹ ಲಕ್ಷಣ ಹೆಚ್ಚಾಗುವುದರಿಂದ ತಂಪಿನ ಆಹಾರ ಪದಾರ್ಥಗಳ ಬದಲು ಬಿಸಿ ಬಿಸಿ ಆಹಾರ ಸೇವಿಸಬೇಕು. ಜೊತೆಗೆ ಮಕ್ಕಳು, ವಯೋವೃದ್ಧರು ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದು ವೈದ್ಯ ಡಾ.ಸುನೀಲ್ ಕುಮಾರ್ ಸಲಹೆ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






