Operation Sindoor: ಬೆಂಗಳೂರಿನ HAL ನಲ್ಲಿ ಹೈಅಲರ್ಟ್: ಓವರ್ ಟೈಂ ಕೆಲಸಕ್ಕೆ ಸಿದ್ಧವಾಗಿರುವಂತೆ ಸೂಚನೆ!

ಬೆಂಗಳೂರು: ಆಪರೇಷನ್ ಸಿಂಧೂರದಿಂದ ಕಂಗೆಟ್ಟಿದ್ದ ಪಾಕ್ ಮತ್ತೆ ಬಾಲ ಬಿಚ್ಚಿದೆ. ಜಮ್ಮು ಕಾಶ್ಮೀರದ ಹಲವೆಡೆ ಮಿಸೈಲ್ ದಾಳಿ ನಡೆಸಿ ಅಟ್ಟಹಾಸ ಮೆರೆದಿದೆ. 35 ನಿಮಿಷ ಡ್ರೋನ್ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಶಾಸ್ತಿ ಮಾಡಿದೆ. ಪಾಕಿಸ್ತಾನದ ಮಿಸೈಲ್ಗಳನ್ನು S-400 ಮಿಸೈಲ್ ಜೆಟ್ ಹೊಡೆದುರುಳಿಸಿದೆ. ಸದ್ಯ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇತ್ತ ರಾಜ್ಯದಲ್ಲಿ ಕೂಡ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ.
ಅದರಂತೆ ಬೆಂಗಳೂರಿನ ಹೆಚ್‌ಎಎಲ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಿಬ್ಬಂದಿ ರಜೆಗಳನ್ನು ರದ್ದು ಮಾಡಲಾಗಿದ್ದು, ಓವರ್ ಟೈಂ ಕೆಲಸಕ್ಕೆ ಸಿದ್ಧವಾಗಿರುವಂತೆ ಸೂಚನೆ ನೀಡಲಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಹೆಚ್‌ಎಎಲ್ ಭಾರತೀಯ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾಗಿದೆ.
1940ರ ಡಿ. 23ರಂದು ಸ್ಥಾಪನೆಯಾದ ಹೆಚ್‌ಎಎಲ್ ವಿಶ್ವದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪನ್ನಗಳ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿದೆ. ಏ. 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿನಡೆಸಿದ್ದು, ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.
ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕ್ ಉಗ್ರರ 9 ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು. ಇದೀಗ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ದೇಶದ ಪ್ರಮುಖ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






