Rivaba Jadeja: ಗುಜರಾತ್ ಸಂಪುಟ ಪುನಾರಚನೆ: ಜಡೇಜಾ ಪತ್ನಿ ರಿವಾಬಾಗೆ ಸಚಿವೆ ಪಟ್ಟ!
ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಇಂದು ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿನ್ನೆಯಷ್ಟೇ ಗುಜರಾತ್ ಸಚಿವ ಸಂಪುಟದ ಸಚಿವರು ಹೊಸ ಸಂಪುಟ ರಚನೆಯ ಕಾರಣಕ್ಕೆ ರಾಜೀನಾಮೆ ನೀಡಿದ್ದರು. ಇಂದು ಸಂಪುಟ ಪುನರಚನೆಯಾಗಿದ್ದು, ರಿವಾಬಾ ಜಡೇಜಾಗೆ ಸಚಿವ ಸ್ಥಾನ ಸಿಕ್ಕಿದೆ.
ಹೌದು ಗಾಂಧಿನಗರದಲ್ಲಿ ಗುಜರಾತ್ ಸಚಿವರಾಗಿ ರಿವಾಬಾ ಪ್ರಮಾಣ ವಚನ ಸ್ವೀಕರಿಸಿದರು. ರಿವಾಬಾ ಜಾಮ್ನಗರದ ಶಾಸಕರಾಗಿದ್ದು, 2019 ರಲ್ಲಿ ಬಿಜೆಪಿ ಸೇರಿದರು. ಜಾತಿ ಮತ್ತು ಪ್ರಾದೇಶಿಕ ಸಮತೋಲನದ ಆಧಾರದ ಮೇಲೆ ಕೆಲವರಿಗೆ, ವಿಪಕ್ಷಗಳಿಂದ ಬಿಜೆಪಿ ಸೇರ್ಪಡೆಯಾದ ಕೆಲ ನಾಯಕರನ್ನ ಗುರುತಿಸಿ ಸಚಿವ ಸ್ಥಾನ ನೀಡಿರುವುದು ಹಿರಿಯ ನಾಯಕರ ಮೆಚ್ಚುಗೆಗೂ ಪಾತ್ರವಾಗಿದೆ.
2027ರ ವಿಧಾನಸಭಾ ಚುನಾವಣೆಯನ್ನ ಗುರಿಯಾಗಿಟ್ಟು ಸಮುದಾಯದ ನಾಯಕರು, ಕಾರ್ಯಕರ್ತರ ಮೇಲೆ ಹಿಡಿತ ಸಾಧಿಸುವ ನಾಯಕರನ್ನ ಸಂಪುಟಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ಪಾಟಿದಾರ್ ಸಮುದಾಯದ ಆರು ಮಂದಿ, ಪರಿಶಿಷ್ಟ ಜಾತಿಯಿಂದ ಮೂವರು, ಆದಿವಾಸಿ ಸಮುದಾಯದ ನಾಲ್ವರು, ಕ್ಷತ್ರಿಯ ಸಮುದಾಯದ ಇಬ್ಬರು, ಒಬಿಸಿ ಸಮುದಾಯದ ಎಂಟು ಮಂದಿ ಹಾಗೂ ಬ್ರಾಹ್ಮಣ ಮತ್ತು ಜೈನ ಸಮುದಾಯ ತಲಾ ಒಬ್ಬೊಬ್ಬರಿಗೆ ಸಚಿವ ಸ್ಥಾನ ನೀಡಲಾಯಿತು. 2019 ರಲ್ಲಿ ಬಿಜೆಪಿಗೆ ಸೇರಿದ ನಂತರ 34 ವರ್ಷದ ರಿವಾಬಾ ಇದೀಗ ಗುಜರಾತ್ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ.
ನವೆಂಬರ್ 2, 1990 ರಂದು ರಾಜ್‌ಕೋಟ್‌ನಲ್ಲಿ ಜನಿಸಿದ ರಿವಾಬಾ, ನಗರದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ನಿಕಟ ಸಂಪರ್ಕ ಹೊಂದಿರುವ ಕುಟುಂಬಕ್ಕೆ ಸೇರಿದವರು. ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ರಿವಾಬಾ ಅವರ ಚಿಕ್ಕಪ್ಪ ಹರಿ ಸಿಂಗ್ ಸೋಲಂಕಿ, ರಾಜ್‌ಕೋಟ್‌ನಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದರು. 2016 ರಲ್ಲಿ ರವೀಂದ್ರ ಜಡೇಜಾ ಅವರನ್ನು ವಿವಾಹವಾದರು. ರಾಜ್‌ಕೋಟ್‌ನಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಈ ದಂಪತಿಗೆ ನಿಧ್ಯಾನ ಎಂಬ ಮಗಳಿದ್ದಾಳೆ. ಬಿಜೆಪಿ ಸೇರುವ ಮೊದಲು, ರಿವಾಬಾ ಜಡೇಜಾ ರಜಪೂತ ಸಂಘಟನೆಯ ಕರ್ಣಿ ಸೇನಾದ ಸದಸ್ಯರಾಗಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?