Yashasvi Jaiswal: 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಬರೆದ ಜೈಸ್ವಾಲ್!

ಚೆಪಾಕ್ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ದಿನದಂದು ಆರಂಭಿಕ ಆಘಾತ ಕಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿ ನಿಂತ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಐತಿಹಾಸಿಕ ಸಾಧನೆ ಮೆರೆದಿದ್ದಾರೆ. ಹೌದು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 56 ರನ್ಗಳ ಇನ್ನಿಂಗ್ಸ್ ಆಡಿದ ಜೈಸ್ವಾಲ್, 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ,
ಅದರಲ್ಲೂ ತವರು ನೆಲದಲ್ಲಿ ತಮ್ಮ ಮೊದಲ 10 ಇನ್ನಿಂಗ್ಸ್ಗಳಲ್ಲಿ 750 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ವೆಸ್ಟ್ ಇಂಡೀಸ್ನ ಜಾರ್ಜ್ ಹ್ಯಾಡ್ಲಿ ಹೆಸರಿನಲ್ಲಿತ್ತು. ಅವರು 1935 ರಲ್ಲಿ 747 ರನ್ ಬಾರಿಸುವ ಮೂಲಕ ಈ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದರು.
ಇದಲ್ಲದೆ ಯಶಸ್ವಿ ಜೈಸ್ವಾಲ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಈ ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ ಅಂದರೆ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಜೈಸ್ವಾಲ್ ಇದುವರೆಗೆ ಆಡಿರುವ 10 ಪಂದ್ಯಗಳ 17 ಇನ್ನಿಂಗ್ಸ್ಗಳಲ್ಲಿ 67.75 ಸರಾಸರಿಯಲ್ಲಿ 1084 ರನ್ ಗಳಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ನ ದಿಗ್ಗಜ ಬ್ಯಾಟ್ ಜೋ ರೂಟ್, ಈ ಆವೃತ್ತಿಯಲ್ಲಿ ಆಡಿರುವ 16 ಪಂದ್ಯಗಳಲ್ಲಿ 53.76 ಸರಾಸರಿಯಲ್ಲಿ 1398 ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿದ್ದಾರುವ ಇಂಗ್ಲೆಂಡ್ನ ಮತ್ತೊಬ್ಬ ಬ್ಯಾಟ್ ಬೆನ್ ಡಕೆಟ್ ಇದುವರೆಗೆ 1028 ರನ್ ಗಳಿಸಿದ್ದಾರೆ.
ಹಾಗೆಯೇ ಬಾಂಗ್ಲಾದೇಶ ವಿರುದ್ಧದ ಈ ಅರ್ಧಶತಕ ಯಶಸ್ವಿ ಜೈಸ್ವಾಲ್ ಅವರ ಟೆಸ್ಟ್ ವೃತ್ತಿಜೀವನದ8ನೇ ಫಿಫ್ಟಿ ಪ್ಲಸ್ ಇನ್ನಿಂಗ್ಸ್ ಆಗಿದೆ. ಇದರೊಂದಿಗೆ ಜೈಸ್ವಾಲ್, 10 ಟೆಸ್ಟ್ ಪಂದ್ಯಗಳಲ್ಲಿ ಅಧಿಕ ಬಾರಿ ಫಿಫ್ಟಿ ಪ್ಲಸ್ ಇನ್ನಿಂಗ್ಸ್ ಆಡಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಸದಾಗೋಪನ್ ರಮೇಶ್ ಈ ಸಾಧನೆ ಮಾಡಿದ್ದು, ಇದೀಗ ಜೈಸ್ವಾಲ್ ಅವರನ್ನು ಸರಿಗಟ್ಟಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






