Yashwant Sardeshpande: ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇನ್ನಿಲ್ಲ!
ಕನ್ನಡ ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆಯ ಲೋಕದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದ ಹಾಸ್ಯನಟ, ನಿರ್ದೇಶಕ, ನಾಟಕಕಾರ, ಸಂಭಾಷಣಾಕಾರ ಯಶವಂತ ಸರದೇಶಪಾಂಡೆ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರ ಅಗಲಿಕೆಯಿಂದ ಕಲಾರಂಗ ಶೋಕದಲ್ಲಿ ಮುಳುಗಿದೆ.
1965ರ ಜೂನ್ 13ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಹಳ್ಳಿಯಲ್ಲಿ ಜನಿಸಿದ ಸರದೇಶಪಾಂಡೆ ಅವರು ಬಾಲ್ಯದಲ್ಲೇ ರಂಗಭೂಮಿಯತ್ತ ಆಕರ್ಷಿತರಾದರು. ಹೆಗ್ಗೋಡಿನ ನಿನಾಸಂನಿಂದ ಡಿಪ್ಲೊಮ ಪಡೆದ ಅವರು ನಂತರ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ನಾಟಕ ರಚನೆ ಹಾಗೂ ಚಲನಚಿತ್ರ ಸಂಭಾಷಣೆಯ ತರಬೇತಿ ಪಡೆದು ತಮ್ಮ ಕಲೆಗೆ ಅಂತರರಾಷ್ಟ್ರೀಯ ಮೌಲ್ಯವನ್ನು ಸೇರಿಸಿದರು.
60ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿರುವ ಅವರು ಅಂಧಯುಗ, ಇನ್‌ಸ್ಪೆಕ್ಟರ್ ಜನರಲ್, ಮಿಡ್‌ಸಮರ್ ನೈಟ್ಸ್ ಡ್ರೀಮ್, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ ಸೇರಿದಂತೆ ಹಲವಾರು ಪ್ರಮುಖ ನಾಟಕಗಳನ್ನು ಕನ್ನಡ ರಂಗಭೂಮಿಗೆ ತಂದರು.
ರಂಗವರ್ತುಲ ಮತ್ತು ಬೇಂದ್ರೆ ರಂಗಾವಳಿ ಮೂಲಕ ಕವಿ ಬೇಂದ್ರೆಯವರ ಎಲ್ಲಾ ನಾಟಕಗಳನ್ನು ರಂಗಮಂದಿರಕ್ಕೆ ತಂದು ವಿಶೇಷ ಯಶಸ್ಸು ಗಳಿಸಿದರು. ಪತ್ನಿ ಖ್ಯಾತ ಕಿರುತೆರೆ ನಟಿ ಮಾಲತಿ ಹಾಗೂ ಮಗಳು ದೋಸ್ತಿಯನ್ನು ಅಗಲಿದ ಸರದೇಶಪಾಂಡೆ ಅವರ ನಿಧನವು ಕನ್ನಡ ಕಲಾರಂಗಕ್ಕೆ ಅಪಾರ ನಷ್ಟವೆಂದು ಪರಿಗಣಿಸಲಾಗಿದೆ.ಯಶವಂತ ಸರದೇಶಪಾಂಡೆಯವರ ಪತ್ನಿ ಮಾಲತಿ ಕೂಡಾ ರಂಗಭೂಮಿ ಮತ್ತು ಕಿರುತೆರೆಯ ಜನಪ್ರಿಯ ಕಲಾವಿದೆ. ದಂಪತಿ ಇಬ್ಬರೂ ಸೇರಿ ಕನ್ನಡ ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?