ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅರೆಸ್ಟ್ – ಇಡಿ ದಾಳಿಯಲ್ಲಿ ಕೋಟಿ ಕೋಟಿ ಆಸ್ತಿ ಸೀಜ್!

ಆಗಸ್ಟ್ 23, 2025 - 16:09
 0  8
ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅರೆಸ್ಟ್ – ಇಡಿ ದಾಳಿಯಲ್ಲಿ ಕೋಟಿ ಕೋಟಿ ಆಸ್ತಿ ಸೀಜ್!

ಚಿತ್ರದುರ್ಗ: ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಇಡಿ (ED) ಬಲೆಗೆ ಬಿದ್ದಿದ್ದಾರೆ. ಇಡಿ ದಾಳಿ ವೇಳೆ ಕಂತೆ ಕಂತೆ ನಗದು, ಚಿನ್ನ ಹಾಗೂ ಬೆಳ್ಳಿ ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಸಿಕ್ಕಿಂನ ಗ್ಯಾಂಗ್‌ಟಕ್‌ನಲ್ಲಿ ಬಂಧಿಸಲಾಗಿದೆ.

ಶುಕ್ರವಾರ ಮುಂಜಾನೆ ಇಡಿ ಅಧಿಕಾರಿಗಳು ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ಗೋವಾ, ಮುಂಬೈ ಹಾಗೂ ಜೋಧ್‌ಪುರ ಸೇರಿ ಒಟ್ಟು 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದರು. ಈ ವೇಳೆ ಸುಮಾರು 12 ಕೋಟಿ ರೂ. ನಗದು, 1 ಕೋಟಿ ರೂ. ವಿದೇಶಿ ಕರೆನ್ಸಿ, 6 ಕೋಟಿ ರೂ. ಮೌಲ್ಯದ ಚಿನ್ನ, 10 ಕೆ.ಜಿ. ಬೆಳ್ಳಿ, 17 ಬ್ಯಾಂಕ್ ಖಾತೆ ಹಾಗೂ 2 ಬ್ಯಾಂಕ್ ಲಾಕರ್‌ಗಳನ್ನು ಸೀಜ್ ಮಾಡಲಾಗಿದೆ.

ಇದೇ ರೀತಿ, ಗೋವಾದಲ್ಲಿ ಪಪ್ಪಿ ಅವರ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊಗಳ ಮೇಲೂ ದಾಳಿ ನಡೆದಿದೆ. ಪಪ್ಪಿ ಒಡೆತನದ King567, Raj567, Puppies003, Ratna Gaming ಸೇರಿದಂತೆ ಹಲವು ಆನ್‌ಲೈನ್ ಬೆಟ್ಟಿಂಗ್ ಸೈಟ್‌ಗಳ ಮಾಹಿತಿಯನ್ನು ಕೂಡ ಇಡಿ ವಶಪಡಿಸಿಕೊಂಡಿದೆ.

ಪಪ್ಪಿಯ ಸಹೋದರ ಕೆ.ಸಿ. ತಿಪ್ಪೇಸ್ವಾಮಿ ದುಬೈನಿಂದ ಡೈಮಂಡ್ ಸಾಫ್ಟ್ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್ 9 ಟೆಕ್ನಾಲಜೀಸ್ ಎಂಬ ಮೂರು ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದು, ಇವುಗಳೆಲ್ಲಾ ಕಾಲ್‌ಸೆಂಟರ್ ಮತ್ತು ಗೇಮಿಂಗ್ ವ್ಯವಹಾರಕ್ಕೆ ಸಂಬಂಧಿಸಿದವುಗಳೇ ಎಂದು ಇಡಿ ತಿಳಿಸಿದೆ.

ಇಡಿ ತನಿಖೆ ಮುಂದುವರಿದಿದ್ದು, ಪಪ್ಪಿ ಹಾಗೂ ಆಪ್ತರ ವಿಚಾರಣೆ ಶೀಘ್ರದಲ್ಲೇ ನಡೆಯಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow