ಕಾಲ್ತುಳಿತ ಪ್ರಕರಣ: ಸರ್ಕಾರದ ವರದಿ ಬಂದ ನಂತರ ಮುಂದಿನ ಕ್ರಮ - ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಆರ್ಸಿಬಿ ಸಂಭ್ರಮಾಚರಣೆ ವೇಳೆಯ ಕಾಲ್ತುಳಿತ ದುರಂತ ಸರ್ಕಾರಕ್ಕೆ ಸಂಕಟ ತಂದಿಟ್ಟಿದೆ. ಈಗಾಗಲೇ ಹಲವರ ತಲೆತಂಡವೂ ಆಗಿದೆ. ಈ ನಡುವೆ, ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿರೋ ಹೈಕೋರ್ಟ್ ಇಂದು ವಿಚಾರಣೆ ನಡೆಸಿದೆ. ಸರ್ಕಾರದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೈಕೋರ್ಟ್ ತಿಳಿಸಿದ್ದು, ಯಾವುದೇ ನಿರ್ದೇಶನ ನೀಡದೇ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದೆ.
ಹೌದು ದುರಂತದ ಬಳಿಕ ಯಾವುದೇ ಪ್ರಕರಣಗಳನ್ನು ದಾಖಲಾಗಿರಲಿಲ್ಲ. ಹೈಕೋರ್ಟೇ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿತ್ತು. ಹಲವರಿಂದ ಹೈಕೋರ್ಟ್ಗೆ ಮಧ್ಯಂತರ ಅರ್ಜಿ ವಿಚಾರಣೆಗೆ ಮನವಿ ಹಿನ್ನೆಲೆ ನ್ಯಾ.ವಿ.ಕಾಮೇಶ್ವರ ರಾವ್ ಮತ್ತು ನ್ಯಾ.ಸಿ.ಎಂ.ಜೋಶಿ ಅವರ ಪೀಠದಿಂದ ಇಂದು ವಿಚಾರಣೆ ಮಾಡಿದ್ದು, ಸರ್ಕಾರದ ಪ್ರತಿಕ್ರಿಯೆ ಬಂದ ಬಳಿಕ ತೀರ್ಮಾನ ನೀಡುವುದಾಗಿ ಹೇಳಿ ಜೂ.12 ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಜೂನ್ 5ರಂದು ನಡೆದ ವಿಚಾರಣೆಯಲ್ಲಿ ಘಟನೆಯ ಸಂಪೂರ್ಣ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಕೋರ್ಟ್ ಸೂಚಿಸಿತ್ತು. ಆದರೆ ಸರ್ಕಾರ ಯಾವುದೇ ವರದಿ ಸಲ್ಲಿಸಿಲ್ಲ. ವಿಚಾರಣೆ ವೇಳೆ ಸರ್ಕಾರದಿಂದ ಇನ್ನೂ ವರದಿ ಏಕೆ ಸಲ್ಲಿಸಿಲ್ಲ ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ. ಈ ವೇಳೆ ಹೈಕೋರ್ಟ್ಗೆ ಎಜಿ ಶಶಿಕಿರಣ್ ಶೆಟ್ಟಿ ಉತ್ತರಿಸಿದ್ದು, ನಾವು ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದೇವೆ ಎಂದರು.
ಮ್ಯಾಜಿಸ್ಟೀರಿಯಲ್ ತನಿಖೆ, ನ್ಯಾಯಾಂಗ ತನಿಖೆ ವರದಿ ಸಲ್ಲಿಸುತ್ತೇವೆ. ತನಿಖೆಗೆ ಮೊದಲೇ ಸರ್ಕಾರ ತೀರ್ಮಾನಿಸಿದೆ ಎಂದು ವಿವಾದ ಬೇಡ. ಹೀಗಾಗಿ ಒಂದು ತಿಂಗಳು ಕಾಲಾವಕಾಶ ನೀಡುವಂತೆ ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು. ಜೂನ್ 12ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಹೈಕೋರ್ಟ್ ಸೂಚಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






