ಗ್ಲೇನ್ ಮ್ಯಾಕ್ಸ್ವೆಲ್ ಅಬ್ಬರ: ಸ್ಟಾರ್ ಆಲ್ರೌಂಡರ್ ಬಿಟ್ಟು ತಪ್ಪು ಮಾಡ್ತಾ RCB!?

ಬಾರ್ಡರ್ ಗವಾಸ್ಕರ್ ಟ್ರೋಫಿ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳ ಚಿತ್ತ ಬಿಗ್ ಬ್ಯಾಷ್ ಲೀಗ್ ನತ್ತ ನೆಟ್ಟಿದೆ. ಸ್ಟಾರ್ ಅಂತಾರಾಷ್ಟ್ರೀಯ ಆಟಗಾರರು ಬಿಬಿಎಲ್ ಟಿ20 ಲೀಗ್ನಲ್ಲಿ ಅಬ್ಬರಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಈ ಲೀಗ್ನಲ್ಲಿ ಅಮೋಘ ಆಟವನ್ನು ಆಡಿದ್ದಾರೆ. ಇವರ ಆಟವನ್ನು ಕಂಡು ಪಂಜಾಬ್ ಕಿಂಗ್ಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಫ್ರಾಂಚೈಸಿ ಮ್ಯಾಕ್ಸ್ವೆಲ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದರು. ಇದಕ್ಕೆ ಮುಖ್ಯ ಕಾರಣ ಕಳೆದ ಸೀಸನ್ನಲ್ಲಿನ ಗ್ಲೆನ್ ಮ್ಯಾಕ್ಸ್ವೆಲ್ ಅವರ ಕಳಪೆ ಫಾರ್ಮ್. IPL 2024 ರಲ್ಲಿ ಆರ್ಸಿಬಿ ಪರ 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮ್ಯಾಕ್ಸಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿದ್ದರು. ಅದರಲ್ಲೂ ಒಂದೇ ಸೀಸನ್ನಲ್ಲಿ 5 ಬಾರಿ ಸೊನ್ನೆಗೆ ಔಟಾಗಿದ್ದರು. ಹೀಗಾಗಿ ಆರ್ಸಿಬಿ ಫ್ರಾಂಚೈಸಿ ಮ್ಯಾಕ್ಸ್ವೆಲ್ಗೆ ತಂಡದಿಂದ ಗೇಟ್ ಪಾಸ್ ನೀಡಿದ್ದರು.
ಹೀಗೆ ಹೊರಬಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 4.20 ಕೋಟಿ ರೂ. ಖರೀದಿಸಿದೆ. ಈ ಖರೀದಿ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್ವೆಲ್ ಅವರ ಬ್ಯಾಟ್ ಮತ್ತೆ ಸದ್ದು ಮಾಡಲಾರಂಭಿಸಿದೆ. ಅದರಲ್ಲೂ ಬಿಗ್ ಬ್ಯಾಷ್ ಲೀಗ್ನಲ್ಲಿ ಮ್ಯಾಕ್ಸಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಈ ಬಾರಿಯ ಬಿಗ್ ಬ್ಯಾಷ್ ಲೀಗ್ನಲ್ಲಿ ಈವರೆಗೆ 8 ಇನಿಂಗ್ಸ್ ಆಡಿರುವ ಗ್ಲೆನ್ ಮ್ಯಾಕ್ಸ್ವೆಲ್ 297 ರನ್ ಕಲೆಹಾಕಿದ್ದಾರೆ. ಅದು ಕೂಡ ಕೇವಲ 153 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ಮ್ಯಾಕ್ಸ್ವೆಲ್ 194.1 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ ಎದುರಾಳಿ ಬೌಲರ್ಗಳ ಬೆಂಡೆತ್ತಿದ್ದಾರೆ. ಈ ವೇಳೆ ಮ್ಯಾಕ್ಸಿ ಬ್ಯಾಟ್ನಿಂದ 26 ಭರ್ಜರಿ ಸಿಕ್ಸ್ ಹಾಗೂ 17 ಫೋರ್ಗಳು ಸಿಡಿದಿವೆ.
ಗ್ಲೆನ್ ಮ್ಯಾಕ್ಸ್ವೆಲ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಮೆಲ್ಬೋರ್ನ್ ಸ್ಟಾರ್ಸ್ ತಂಡವು ಸತತ ಐದು ಗೆಲುವು ದಾಖಲಿಸಿ ನಾಕೌಟ್ ಹಂತಕ್ಕೇರಿದೆ. ಇದೀಗ ಭರ್ಜರಿ ಫಾರ್ಮ್ನಲ್ಲಿರುವ ಗ್ಲೆನ್ ಮ್ಯಾಕ್ಸ್ವೆಲ್ ಇದೇ ಸಿಡಿಲಬ್ಬರವನ್ನು ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರೆಸುವ ನಿರೀಕ್ಷೆಯಿದೆ.
ನಿಮ್ಮ ಪ್ರತಿಕ್ರಿಯೆ ಏನು?






