ಜೈಲಲ್ಲಿ ಸೌಲಭ್ಯಕ್ಕಾಗಿ ದರ್ಶನ್ ಅರ್ಜಿ: ಅಕ್ಟೋಬರ್ 9ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
ಬೆಂಗಳೂರು: ರೇಣುಕಾಸ್ವಾಮಿ ಕೇಸ್ನಲ್ಲಿ ಮತ್ತೆ ದರ್ಶನ್ ಜೈಲು ಸೇರಿದ್ದಾರೆ. ಹಾಸಿಗೆ ದಿಂಬು ವಿಚಾರಕ್ಕೆ ಮತ್ತೆ ಮತ್ತೆ ಕೋರ್ಟ್ ಮೊರೆ ಹೋಗ್ತಿರುವ ದರ್ಶನ್, ಸಲ್ಲಿಸಿರುವ ಅರ್ಜಿಯ ವಿಚಾರಣೆ ಇವತ್ತು ನಡೆದಿದ್ದು, ಅರ್ಜಿಯ ಆದೇಶವನ್ನ 57ನೇ ಸೆಷನ್ಸ್ ನ್ಯಾಯಾಲಯ ಅಕ್ಟೋಬರ್ 9ಕ್ಕೆ ಕಾಯ್ದಿರಿಸಿದೆ. ಇಂದು ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ಖುದ್ದು ಹಾಜರಾದ ಜೈಲು ಅಧೀಕ್ಷಕ ಸುರೇಶ್ ಅವರು ದರ್ಶನ್‌ಗೆ ನೀಡಿರುವ ಸೌಲಭ್ಯಗಳ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.
ಜೈಲಾಧಿಕಾರಿಗಳ ಪರ ವಾದ ಆರಂಭಿಸಿದ ಪ್ರಸನ್ನ ಕುಮಾರ್, 'ಜೈಲಿನ ನಿಯಮಗಳ ಪ್ರಕಾರ ಸೌಲಭ್ಯಗಳನ್ನು ನೀಡಲಾಗಿದೆ. ಮಲಗಲು ಪಲ್ಲಂಗ ಕೊಡಿ ಎಂದರೆ ಹೇಗೆ ಕೊಡಲು ಸಾಧ್ಯ? ಆರೋಪಿಗೆ ಬೆಳಗ್ಗೆ ಮತ್ತು ಸಾಯಂಕಾಲ ತಲಾ 1 ಗಂಟೆ ವಾಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಆದರೆ ಆರೋಪಿ ಹೊರಗಡೆ ಹೋಗಬೇಕು, ಇದೇ ಬ್ಯಾರಕ್‌ನಲ್ಲಿಯೇ ಇರಬೇಕು ಎಂದರೆ ಆಗುವುದಿಲ್ಲ. ಅವರಿಗೆ ಬಿಸಿಲು ಬರುತ್ತಿಲ್ಲ ಎಂದರೆ ಜೈಲಾಧಿಕಾರಿಗಳು ಹೊಣೆಯಾಗಲು ಸಾಧ್ಯವಿಲ್ಲ. ಮೂಲಭೂತ ಹಕ್ಕು ಇರಬಹುದು. ಆದರೆ ಜೈಲಿನ ನಿಯಮಗಳ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ' ಎಂದರು.
ವಕೀಲ ಸುನೀಲ್ ಅವರು, “ನ್ಯಾಯಾಲಯ ನೀಡಿದ ಸೂಚನೆಗಳನ್ನು ಜೈಲಾಧಿಕಾರಿಗಳು ಪಾಲಿಸುತ್ತಿಲ್ಲ. ಆರೋಪಿ ದರ್ಶನ್ ಆರೋಗ್ಯದ ದೃಷ್ಟಿಯಿಂದ ಸಾಮಾನ್ಯ ವ್ಯವಸ್ಥೆಗಳು ಮಾತ್ರ ಕಲ್ಪಿಸಬೇಕೆಂದು ಕೇಳಲಾಗಿದೆ. 14 ದಿನ ಕ್ವಾರಂಟೈನ್ ಸೆಲ್‌ನಲ್ಲಿ ಇರಬೇಕು ಎಂದು ನಿಯಮ ಇದೆ, ಆದರೆ 45 ದಿನಗಳಿಂದ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಬೇರೆ ಬ್ಯಾರಕ್‌ಗೆ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಲಾಗಿದೆ” ಎಂದು ವಾದ ಮಂಡಿಸಿದರು.
ಪ್ರಸನ್ನ ಕುಮಾರ್ ಅವರು, “ಕ್ವಾರಂಟೈನ್ ಸೆಲ್ ಕಾರಾಗೃಹದ ಭಾಗವಾಗಿದೆ. 1964ರ ಜೈಲು ನಿಯಮಗಳ ಪ್ರಕಾರ ಭದ್ರತೆಯ ಸವಾಲುಗಳನ್ನು ಗಮನಿಸಿ ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಇದಕ್ಕೂ ಮುಂಚೆ ನೀಡಿದ್ದ ಸೌಲಭ್ಯಗಳನ್ನು ದರ್ಶನ್ ದುರುಪಯೋಗಪಡಿಸಿದ್ದಾನೆ” ಎಂದು ಪ್ರತಿವಾದಿಸಿದರು. ನ್ಯಾಯಾಲಯವು ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಅಕ್ಟೋಬರ್ 9ಕ್ಕೆ ತೀರ್ಪು ಮುಂದೂಡಿತು.
ನಿಮ್ಮ ಪ್ರತಿಕ್ರಿಯೆ ಏನು?