ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಕೌಂಟ್ ಡೌನ್: ವಿರಾಟ್ ಕೊಹ್ಲಿ ಮುಂದಿದೆ 3 ಭರ್ಜರಿ ದಾಖಲೆಗಳು!

ಅ.16ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಭಾನುವಾರ ಅಭ್ಯಾಸ ಆರಂಭಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿ ಬುಧವಾರದಿಂದ ಶುರುವಾಗಲಿದೆ. ಪಂದ್ಯದಲ್ಲಿ ಅಬ್ಬರಿಸಿದರೆ ಕಿಂಗ್ ಕೊಹ್ಲಿ ಹೆಸರಿಗೆ ಕೆಲ ಭರ್ಜರಿ ದಾಖಲೆಗಳು ಸೇರ್ಪಡೆಯಾಗಲಿದೆ.
ವಿರಾಟ್ ಕೊಹ್ಲಿಯ ಮುಂದಿರುವ ದಾಖಲೆಗಳಾವುವು ಎಂಬುವುದನ್ನು ನೋಡೋದಾದ್ರೆ, ವಿರಾಟ್ ಕೊಹ್ಲಿ ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ 866 ರನ್ ಕಲೆಹಾಕಿದ್ದಾರೆ. 11 ಪಂದ್ಯಗಳಲ್ಲಿ 45.57 ಸರಾಸರಿಯಲ್ಲಿ ರನ್ ಪೇರಿಸಿರುವ ಕೊಹ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 144 ರನ್ಗಳನ್ನು ಬಾರಿಸಿದರೆ ಕಿವೀಸ್ ವಿರುದ್ಧ 1000 ರನ್ ಕಲೆಹಾಕಿದ ಭಾರತದ ಮೂರನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಮಾತ್ರ ಈ ಸಾಧನೆ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 9000 ರನ್ ಪೂರೈಸಲು ವಿರಾಟ್ ಕೊಹ್ಲಿಗೆ ಬೇಕಿರುವುದು ಕೇವಲ 53 ರನ್ಗಳು ಮಾತ್ರ. ಮೊದಲ ಟೆಸ್ಟ್ ಪಂದ್ಯದಲ್ಲಿ 53 ರನ್ ಬಾರಿಸಿದರೆ ಭಾರತದ ಪರ ಟೆಸ್ಟ್ನಲ್ಲಿ 9 ಸಾವಿರ ರನ್ಗಳ ಗಡಿದಾಟಿದ ನಾಲ್ಕನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (15,921), ರಾಹುಲ್ ದ್ರಾವಿಡ್ (13,265), ಮತ್ತು ಸುನಿಲ್ ಗವಾಸ್ಕರ್ (10,122) ಮೊದಲ ಮೂರು ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಹಾಗೆಯೇ ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ 337 ರನ್ಗಳ ಅವಶ್ಯಕತೆಯಿದೆ. ಈ ಸರಣಿಯ ಮೂರು ಪಂದ್ಯಗಳಿಂದ ಕಿಂಗ್ ಕೊಹ್ಲಿ 337 ರನ್ ಕಲೆಹಾಕಿದರೆ, ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ಅತೀ ಹೆಚ್ಚು ರನ್ ಬಾರಿಸಿರುವ ರಾಹುಲ್ ದ್ರಾವಿಡ್ (893 ರನ್) ಅವರ ದಾಖಲೆಯನ್ನು ಮುರಿಯಬಹುದು.
ಅದರಂತೆ ನ್ಯೂಝಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಕಡೆಯಿಂದ ಈ ಭರ್ಜರಿ ದಾಖಲೆಗಳನ್ನು ನಿರೀಕ್ಷಿಸಬಹುದು.
ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ(ನಾಯಕ), ಜಸ್ಪ್ರೀತ್ ಬುಮ್ರಾ(ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್(ವಿಕೆಟ್ ಕೀಪರ್), ದೃವ್ ಜುರೆಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






