ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ: ದಸರಾ ಹಬ್ಬಕ್ಕೆ KSRTC ಯಿಂದ 2300 ಹೆಚ್ಚುವರಿ ಬಸ್‌ ಸೇವೆ

ಸೆಪ್ಟೆಂಬರ್ 21, 2025 - 16:12
 0  27
ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ: ದಸರಾ ಹಬ್ಬಕ್ಕೆ KSRTC ಯಿಂದ 2300 ಹೆಚ್ಚುವರಿ ಬಸ್‌ ಸೇವೆ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ರಾಜ್ಯದ ಜನತೆಗೆ ವಿಶೇಷ ಕೊಡುಗೆ ನೀಡಿದೆ. ದಸರಾ ಕಣ್ತುಂಬಿಕೊಳ್ಳಲು ರಾಜ್ಯದೆಲ್ಲೆಡೆಯಿಂದ ಆಗಮಿಸುವ ಪ್ರಯಾಣಿಕರಿಗಾಗಿ 2300ಕ್ಕೂ ಹೆಚ್ಚು ವಿಶೇಷ ಬಸ್‌ಗಳು ಸಂಚರಿಸಲಿವೆ ಎಂದು KSRTC ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಬಸ್ ದಿನಾಂಕಗಳು

ಸೆಪ್ಟೆಂಬರ್ 26, 27 ಮತ್ತು 30 ರಂದು: ಬೆಂಗಳೂರು (ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಮೈಸೂರು ರಸ್ತೆ ಬಸ್ ನಿಲ್ದಾಣ) ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮೈಸೂರು ಮತ್ತು ಇತರ ಕಡೆಗಳಿಗೆ ಬಸ್‌ಗಳು ಓಡಿಸಲಿವೆ.

ಅಕ್ಟೋಬರ್ 2 ಮತ್ತು 5 ರಂದು: ಈ ಬಸ್‌ಗಳು ಬೆಂಗಳೂರಿಗೆ ಮರಳಲಿವೆ.

ಸಂಚಾರ ನಡೆಯುವ ಪ್ರಮುಖ ತಾಣಗಳು

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಮಡಿಕೇರಿ, ಮಂಗಳೂರು, ಶಿವಮೊಗ್ಗ, ಕಾರವಾರ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಇದಲ್ಲದೇ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿರಾಪಳ್ಳಿ, ಪುದುಕೋಟೆ, ಪಣಜಿ, ಶಿರಡಿ, ಪೂಣೆ, ಏರ್ನಾಕುಲಂ, ಪಾಲಕ್ಕಾಡ್ ಮುಂತಾದ ಅಂತರಾಜ್ಯ ತಾಣಗಳಿಗೂ ವಿಶೇಷ ಬಸ್‌ಗಳು ಲಭ್ಯವಾಗಲಿವೆ.

ಮೈಸೂರಿಗೆ ವಿಶೇಷ ವ್ಯವಸ್ಥೆ

ಮೈಸೂರು ದಸರಾಕ್ಕೆ ಹೆಚ್ಚಿನ ಪ್ರಯಾಣಿಕರು ಆಗಮಿಸುವುದನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ 260 ಹೆಚ್ಚುವರಿ ಬಸ್‌ಗಳು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಬೃಂದಾವನ ಉದ್ಯಾನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಚಾಮರಾಜನಗರಗಳಿಗೆ 350 ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.

ಒಟ್ಟಾರೆಯಾಗಿ 610 ವಿಶೇಷ ಬಸ್‌ಗಳನ್ನು ಮೈಸೂರಿಗೆ ಮೀಸಲಿಟ್ಟಿರುವ KSRTC, ಈ ಬಾರಿ ಪ್ರಯಾಣಿಕರಿಗೆ ಸುಗಮ ಸಂಚಾರ ಒದಗಿಸಲು ಸಜ್ಜಾಗಿದೆ. ಇದಕ್ಕೆ ಹೆಚ್ಚುವರಿಯಾಗಿ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ನೇರ ಸಂಪರ್ಕ ಕಲ್ಪಿಸುವ “ಫ್ಲೈ ಬಸ್” ಸೇವೆಯೂ ಲಭ್ಯವಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow