ನಾಳೆಯಿಂದ ನವರಾತ್ರಿಯೊಂದಿಗೆ GST ಉತ್ಸವ ಆರಂಭ: ಪ್ರಧಾನಿ ಮೋದಿ

ಸೆಪ್ಟೆಂಬರ್ 21, 2025 - 18:17
 0  16
ನಾಳೆಯಿಂದ ನವರಾತ್ರಿಯೊಂದಿಗೆ GST ಉತ್ಸವ ಆರಂಭ: ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ದೇಶದ ಜನತೆಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು. ನಾಳೆಯಿಂದ ನವರಾತ್ರಿ ಹಬ್ಬದ ಮೊದಲ ದಿನ ಆರಂಭವಾಗಲಿದ್ದು, ಅದೇ ದಿನದಿಂದ ಜಿಎಸ್‌ಟಿ ಉತ್ಸವವೂ ಪ್ರಾರಂಭವಾಗಲಿದೆ ಎಂದು ಅವರು ಘೋಷಿಸಿದರು.

“ಜಿಎಸ್‌ಟಿ ಮೂಲಕ ದೇಶದ ಪ್ರತಿಯೊಂದು ಮನೆಯಲ್ಲೂ ಉಳಿತಾಯ ಆರಂಭವಾಗಲಿದೆ. ಎಲ್ಲ ವರ್ಗದ ಜನರಿಗೆ ಇದು ಉಳಿತಾಯದ ಉತ್ಸವವಾಗಲಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಜಿಎಸ್‌ಟಿ ಸುಧಾರಣೆಯ ಮಹತ್ವ

2017ರಲ್ಲಿ ಭಾರತದಲ್ಲಿ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ದಶಕಗಳಿಂದಲೂ ಇರುವ ತೆರಿಗೆ ತೊಂದರೆಗಳನ್ನು ನಿವಾರಣೆ ಮಾಡಲಾಯಿತು ಎಂದು ಪ್ರಧಾನಿ ನೆನಪಿಸಿದರು. “ಹಿಂದೆ ದೇಶದಾದ್ಯಂತ ಬೇರೆ ಬೇರೆ ರೀತಿಯ ತೆರಿಗೆಗಳು ಜಾರಿಯಲ್ಲಿದ್ದವು. ಬೆಂಗಳೂರಿನಿಂದ ಹೈದರಾಬಾದ್‌ಗೆ ಉತ್ಪನ್ನ ಕಳಿಸುವುದಕ್ಕೂ ಜನ ತೊಂದರೆ ಅನುಭವಿಸುತ್ತಿದ್ದರು. ಈಗ ‘ಒನ್ ನೇಷನ್, ಒನ್ ಟ್ಯಾಕ್ಸ್’ ಕನಸು ನನಸಾಗಿದೆ,” ಎಂದರು.

ಹೊಸ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು

ಮೋದಿ ಅವರು, ಸಮಯ ಬದಲಾದಂತೆ ದೇಶದ ಅಗತ್ಯತೆಗಳು ಬದಲಾಗುತ್ತವೆ ಎಂದು ಹೇಳಿ, ಹೊಸ ಪೀಳಿಗೆಯ ಅಗತ್ಯತೆಗಳಿಗೆ ಅನುಗುಣವಾಗಿ ಜಿಎಸ್‌ಟಿಯಲ್ಲಿ ಸುಧಾರಣೆಗಳನ್ನು ತರಲಾಗಿದೆ ಎಂದು ತಿಳಿಸಿದರು.

“ಇವು ಮಧ್ಯಮ ವರ್ಗದವರಿಗೆ ಸಹಕಾರಿಯಾಗಲಿವೆ, ರಾಜ್ಯಗಳ ಅಭಿವೃದ್ಧಿಗೆ ಪೂರಕವಾಗಲಿವೆ. ಜಿಎಸ್‌ಟಿ ಮೂಲಕ ದೇಶದ ಭವಿಷ್ಯಕ್ಕೆ ಹೊಸ ಶಕ್ತಿ ಸಿಗಲಿದೆ. ನಾಳೆಯಿಂದ ಜಾರಿಗೆ ಬರುವ ಈ ಜಿಎಸ್‌ಟಿ ಸುಧಾರಣೆಗಳು ಭಾರತದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲಿವೆ. ಇದು ಹೊಸ ಇತಿಹಾಸವನ್ನು ಸೃಷ್ಟಿಸಲಿದೆ,” ಎಂದು ಪ್ರಧಾನಿ ಮೋದಿ ಭಾಷಣವನ್ನು ಸಮಾಪ್ತಿಗೊಳಿಸಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow