ಬಿಗ್ ಶಾಕಿಂಗ್ ನ್ಯೂಸ್: ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆ ಹೆಚ್ಚಳ - ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ರಿವೀಲ್!
ಬೆಂಗಳೂರು:- ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆ ಹೆಚ್ಚಳ ಆಗುತ್ತಿದೆ ಎಂದು ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ರಿವೀಲ್ ಆಗಿದೆ.
ಕರ್ನಾಟಕದಲ್ಲಿ 41,000ಕ್ಕೂ ಹೆಚ್ಚು ಮಕ್ಕಳು ಜನ್ಮಜಾತ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಇತ್ತೀಚಿನ ಅಧ್ಯಯನಗಳು ಬಹಿರಂಗಪಡಿಸಿವೆ. ಅರ್ಧದಷ್ಟು ಮಕ್ಕಳಿಗೆ ಮಾತ್ರ ಚಿಕಿತ್ಸೆ ದೊರೆತಿರುವುದು ಆತಂಕಕಾರಿ ಸಂಗತಿ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ರೋಗ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು, ಇಂಥ ಸಮಸ್ಯೆಗಳ ಸಂದರ್ಭದಲ್ಲಿ ಉಚಿತವಾಗಿ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ.
ರಾಜ್ಯದ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚೆಚ್ಚು ಕಂಡುಬರುತ್ತಿರುವ ಸಂದರ್ಭದಲ್ಲೇ ಈ ಆಘಾತಕಾರಿ ಮಾಹಿತಿ ಕೂಡ ಹೊರಬಿದ್ದಿದೆ. ಹುಟ್ಟಿನಿಂದಲೇ ಹೃದಯ ರೋಗಗಳನ್ನು ಹೊಂದಿರುವ ಸುಮಾರು 20 ಸಾವಿರದಷ್ಟು ಮಕ್ಕಳಿಗೆ ಚಿಕಿತ್ಸೆ ದೊರೆಯದೇ ಇರುವುದು ಹೃದಯಾಘಾತದಂತಹ ಪ್ರಕರಣಗಳ ಆತಂಕ ಹೆಚ್ಚಿಸಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ತಪಾಸಣೆಗೆ ಒಳಪಡಿಸಿ ಜನ್ಮಜಾತ ಹೃದಯ ರೋಗಗಳ ಬಗ್ಗೆ ಪತ್ತೆಮಾಡಲಾಗುತ್ತದೆ.
ಜನ್ಮಜಾತ ಹೃದಯ ರೋಗ ಅಥವಾ ಕಾಯಿಲೆ ಎಂದರೆ ಜನಿಸುವ ಸಂದರ್ಭದಲ್ಲೇ ಹೃದಯ ಸಮಸ್ಯೆ ಇರುವ ಸ್ಥಿತಿಯಾಗಿದೆ. ಇಲ್ಲಿ, ಭ್ರೂಣದಲ್ಲಿದ್ದಾಗಲೇ ಶಿಶುವಿನ ಹೃದಯದಲ್ಲಿ ಬೆಳವಣಿಗೆ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡು ಹುಟ್ಟಿನ ನಂತರವೂ ಹಾಗೆಯೇ ಮುಂದುವರಿಯುತ್ತದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಕರ್ನಾಟಕದಲ್ಲಿ ಈ ಬಗ್ಗೆ ಪತ್ತೆಹಚ್ಚಲಾಗುತ್ತದೆ. ರೋಗನಿರ್ಣಯ ಮಾಡಿದ ನಂತರ, ಬಾಧಿತ ಮಕ್ಕಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯ ಮೂಲಕ ಉಚಿತವಾಗಿ ಚಿಕಿತ್ಸೆ ನೀಡುವ ವಿಶೇಷ ಆಸ್ಪತ್ರೆಗಳಿಗೆ ತೆರಳುವಂತೆ ಶಿಫಾರಸು ಮಾಡಲಾಗುತ್ತದೆ.
ಪ್ರತಿ ಮಗುವನ್ನು ನಿಯಮಿತವಾಗಿ ಪತ್ತೆಹಚ್ಚುವುದು ಮತ್ತು ಅನುಸರಿಸುವುದು ಇಲ್ಲಿನ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಒಪ್ಪಿಕೊಂಡಿರುವುದಾಗಿ ವರದಿ ಉಲ್ಲೇಖಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?