ಬಿಡುಗಡೆ ಆಯ್ತು ‘ಬಾಹುಬಲಿ: ದಿ ಎಪಿಕ್’: ಆದ್ರೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಬೇಸರ 

ಅಕ್ಟೋಬರ್ 31, 2025 - 20:04
 0  10
ಬಿಡುಗಡೆ ಆಯ್ತು ‘ಬಾಹುಬಲಿ: ದಿ ಎಪಿಕ್’: ಆದ್ರೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಬೇಸರ 

ಭಾರತೀಯ ಸಿನಿಮಾ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದ ‘ಬಾಹುಬಲಿ’ ಸರಣಿ ಇದೀಗ ಹೊಸ ರೂಪದಲ್ಲಿ ಮತ್ತೆ ಬಿಡುಗಡೆ ಆಗಿದೆ. ‘ಬಾಹುಬಲಿ: ದಿ ಬಿಗಿನಿಂಗ್’ (2015) ಮತ್ತು ‘ಬಾಹುಬಲಿ: ದಿ ಕನ್‌ಕ್ಲೂಷನ್’ (2017) ಚಿತ್ರಗಳನ್ನು ಒಟ್ಟಿಗೆ ಸೇರಿಸಿ ನಿರ್ಮಿಸಿದ ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಇಂದು (ಅಕ್ಟೋಬರ್ 31) ಬಿಡುಗಡೆಯಾಗಿದೆ.

ಈ ಹೊಸ ಸಂಚಿಕೆ 3 ಗಂಟೆ 42 ನಿಮಿಷಗಳ ಅವಧಿಯಲ್ಲಿದ್ದು, ಎರಡೂ ಸಿನಿಮಾಗಳಿಂದ ಅನೇಕ ದೃಶ್ಯಗಳು ತೆಗೆದುಹಾಕಲ್ಪಟ್ಟಿವೆ. ಈ ಸಂಪಾದನಾ ಕಾರ್ಯವನ್ನು ಸ್ವತಃ ನಿರ್ದೇಶಕ ಎಸ್.ಎಸ್. ರಾಜಮೌಳಿ ಮಾಡಿರುವುದು ವಿಶೇಷ. ಕಥೆಯ ಪ್ರಗತಿಯ ದೃಷ್ಟಿಯಿಂದ ಅನವಶ್ಯಕ ಎನಿಸಿದ ದೃಶ್ಯಗಳು, ಹಾಡುಗಳು ಹಾಗೂ ಕೆಲವು ಪಾತ್ರಗಳನ್ನು ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಆದರೆ ಈ ತೀರ್ಮಾನ ಸುದೀಪ್ ಅಭಿಮಾನಿಗಳಿಗೆ ಬೇಸರ ತಂದಿದೆ. ‘ಬಾಹುಬಲಿ: ದಿ ಬಿಗಿನಿಂಗ್’ ಸಿನಿಮಾದಲ್ಲಿ ಸುದೀಪ್ ಅವರು “ಅಸ್ಲಂ ಖಾನ್” ಎಂಬ ಅರೆಬಿಯನ್ ಶಸ್ತ್ರಾಸ್ತ್ರ ವ್ಯಾಪಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಟ್ಟಪ್ಪನ ಪಾತ್ರದ ಶಕ್ತಿ ಮತ್ತು ಮಹತ್ವವನ್ನು ಚಿತ್ರಿಸುವಲ್ಲಿ ಆ ಪಾತ್ರ ಪ್ರಮುಖವಾಗಿತ್ತು. ಸುದೀಪ್ ಅವರ ಅದ್ಭುತ ಅಭಿನಯಕ್ಕೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆದರೆ ‘ಬಾಹುಬಲಿ: ದಿ ಎಪಿಕ್’ ಆವೃತ್ತಿಯಲ್ಲಿ ಸುದೀಪ್ ಅವರ ದೃಶ್ಯಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದರಿಂದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಚಿತ್ರ ನೋಡದಂತೆ ಕರೆ ನೀಡಿದ್ದರೆ, ಇನ್ನು ಕೆಲವರು “ರಾಜಮೌಳಿ ಚಿತ್ರವನ್ನು ಕಿರಿದು ಮಾಡಲು ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ” ಎಂದು ಬೆಂಬಲಿಸಿದ್ದಾರೆ.

ಸುದೀಪ್ ಅವರ ಪಾತ್ರ ಮಾತ್ರವಲ್ಲ, ಪ್ರಭಾಸ್, ರಾಣಾ, ತಮನ್ನಾ ಮತ್ತು ಅನುಷ್ಕಾ ಅವರ ಕೆಲವು ದೃಶ್ಯಗಳು, ಹಾಡುಗಳು ಮತ್ತು ಹಾಸ್ಯಪೂರ್ಣ ಕ್ಷಣಗಳನ್ನೂ ರಾಜಮೌಳಿ ತೆಗೆದುಹಾಕಿದ್ದಾರೆ. ‘ಬಾಹುಬಲಿ’ಯ ಎರಡು ಭಾಗಗಳ ಒಟ್ಟು ಅವಧಿ ಸುಮಾರು 5 ಗಂಟೆ 50 ನಿಮಿಷ ಇದ್ದು, ಹೊಸ ಆವೃತ್ತಿಯಲ್ಲಿ ಸುಮಾರು 2 ಗಂಟೆಗಳಷ್ಟು ದೃಶ್ಯಗಳನ್ನು ಕತ್ತರಿಸಲಾಗಿದೆ. ವಿಶೇಷವೆಂದರೆ, ರಾಜಮೌಳಿ ಸ್ವತಃ ‘ಬಾಹುಬಲಿ 1’ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು, ಆದರೆ ಹೊಸ ಆವೃತ್ತಿಯಲ್ಲಿ ತಮ್ಮ ಪಾತ್ರವನ್ನೇ ತೆಗೆದುಹಾಕಿದ್ದಾರೆ ಎನ್ನಲಾಗುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow