ಬಿಹಾರ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್: ನ. 6,11 ಎರಡು ಹಂತದಲ್ಲಿ ಮತದಾನ, ನ.14ಕ್ಕೆ ಫಲಿತಾಂಶ
ಬಿಹಾರ: ಬಿಹಾರದ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಈ ವರ್ಷ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ.
-
ಮೊದಲ ಹಂತ: ನವೆಂಬರ್ 6 ರಂದು 121 ಕ್ಷೇತ್ರಗಳಲ್ಲಿ ಮತದಾನ.
-
ಎರಡನೇ ಹಂತ: ನವೆಂಬರ್ 11 ರಂದು 122 ಕ್ಷೇತ್ರಗಳಲ್ಲಿ ಮತದಾನ.
ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ಹಿಂಪಡೆಗೆ ಮುಖ್ಯ ದಿನಾಂಕಗಳು:
-
ಮೊದಲ ಹಂತ: ನಾಮಪತ್ರ ಸಲ್ಲಿಕೆ ಅಕ್ಟೋಬರ್ 17, ಪರಿಶೀಲನೆ ಅಕ್ಟೋಬರ್ 18, ಹಿಂಪಡೆ ಕೊನೆಯ ದಿನ ಅಕ್ಟೋಬರ್ 20.
-
ಎರಡನೇ ಹಂತ: ನಾಮಪತ್ರ ಸಲ್ಲಿಕೆ ಅಕ್ಟೋಬರ್ 21, ಪರಿಶೀಲನೆ ಅಕ್ಟೋಬರ್ 21, ಹಿಂಪಡೆ ಕೊನೆಯ ದಿನ ಅಕ್ಟೋಬರ್ 23.
ಚುನಾವಣಾ ಫಲಿತಾಂಶ ನವೆಂಬರ್ 14 ರಂದು ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ಒಟ್ಟು 243 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬಿಹಾರದಲ್ಲಿರುವ 243 ವಿಧಾನಸಭಾ ಕ್ಷೇತ್ರಗಳ ಪೈಕಿ 203 ಸಾಮಾನ್ಯ ಕ್ಷೇತ್ರಗಳಾಗಿದ್ದು, 2 ಎಸ್ಟಿ ಹಾಗೂ 38 ಎಸ್ಸಿ ಮೀಸಲು ಕ್ಷೇತ್ರಗಳಾಗಿವೆ. ಬಿಹಾರದಲ್ಲಿ ಒಟ್ಟು 7.43 ಕೋಟಿ ಮತದಾರರು ಇದ್ದಾರೆ.
ಈ ಪೈಕಿ 3.92 ಕೋಟಿ ಪುರುಷ ಮತದಾರರು, 3.50 ಕೋಟಿ ಮಹಿಳಾ ಮತದಾರರು, 1,725 ತೃತೀಯಲಿಂಗಿ ಮತದಾರರಿದ್ದಾರೆ, 14.01 ಲಕ್ಷ ಫಸ್ಟ್ ಟೈಮ್ ವೋಟರ್ಸ್ ಇದ್ದಾರೆ. ಒಟ್ಟು 90,712 ಬೂತ್‌ಗಳನ್ನ ನಿರ್ಮಾಣ ಮಾಡಲಾಗಿದ್ದು, ನಗರದಲ್ಲಿ 13,911 ಹಾಗೂ ಗ್ರಾಮೀಣ ಭಾಗದಲ್ಲಿ 76,801 ಬೂತ್‌ಗಳಿರಲಿವೆ. ಎಲ್ಲಾ ಬೂತ್‌ಗಳಲ್ಲೂ ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ನೇತೃತ್ವದ ಎನ್‌ಡಿಎ ಮತ್ತು ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎನ್‌ಡಿಎ ಪ್ರಸ್ತುತ 131 ಸ್ಥಾನಗಳನ್ನು ಹೊಂದಿದ್ದರೆ ವಿರೋಧ ಪಕ್ಷ 111 ಸ್ಥಾನಗಳನ್ನು ಹೊಂದಿದೆ. ಇನ್ನುಳಿದಂತೆ ಬಿಜೆಪಿ 80, ಜೆಡಿ(ಯು) 45, ಎಚ್‌ಎಎಂ(ಎಸ್) 4 ಮತ್ತು ಇಬ್ಬರು ಸ್ವತಂತ್ರರು ಎನ್‌ಡಿಎಗೆ ಬಲ ನೀಡಿದರೆ ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11, ಸಿಪಿಐ(ಎಂ) 2 ಮತ್ತು ಸಿಪಿಐ 2 ಸ್ಥಾನ ಹೊಂದಿದೆ.
ನಿಮ್ಮ ಪ್ರತಿಕ್ರಿಯೆ ಏನು?