ಬೇರೆ ಯುವತಿಯೊಂದಿಗೆ ಗಂಡನ ಸರಸ: ಮದುವೆಯಾದ 4 ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ!

ಆಗಸ್ಟ್ 17, 2025 - 14:02
 0  38
ಬೇರೆ ಯುವತಿಯೊಂದಿಗೆ ಗಂಡನ ಸರಸ: ಮದುವೆಯಾದ 4 ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ!

ತುಮಕೂರು: ಮದುವೆಯಾದ ಬಳಿಕವೂ ಪತಿ ಮತ್ತೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆಂಬ ಮನಸ್ಥಾಪದಿಂದ ನವವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾದ ಜ್ಯೋತಿನಗರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿ ಪೃಥ್ವಿರಾಣಿ (20) ಎಂದು ಗುರುತಿಸಲಾಗಿದೆ. ನಾಲ್ಕು ವರ್ಷದ ಪ್ರೇಮ ಸಂಬಂಧದ ಬಳಿಕ, ಕಳೆದ ನಾಲ್ಕು ತಿಂಗಳ ಹಿಂದೆ ಶಿರಾ ತಾಲೂಕಿನ ಬುಕಾಪಟ್ಟದ ಪೃಥ್ವಿರಾಣಿ ಹಾಗೂ ಕಿಲಾರ್ಧಹಳ್ಳಿಯ ಜೈಮಾರುತಿ ನಾಯಕ್ ದಂಪತಿಯಾಗಿ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ನಂತರ ಶಿರಾ ಪಟ್ಟಣದ ಜ್ಯೋತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಈ ನಡುವೆ ಜೈಮಾರುತಿ ಇನ್ನೊಬ್ಬ ಯುವತಿಯೊಂದಿಗೆ ಸಲುಗೆಯಿಂದ ಇದ್ದಿದ್ದಕ್ಕೆ ಆಕೆ "ನನ್ನನ್ನು ಪ್ರೀತಿಸಿ ಮದುವೆಯಾದರೂ ಮತ್ತೊಬ್ಬಳಿಗೆ ಸಿಲುಕಿದ್ದೀಯಾ" ಎಂದು ಪತಿಯನ್ನು ಪ್ರಶ್ನಿಸಿದ್ದಳು. ಇದರಿಂದ ದಂಪತಿಗಳ ನಡುವೆ ನಿರಂತರ ಜಗಳ ನಡೆದು, ಈ ವೇಳೆ ಪತಿ ಹಲ್ಲೆ ಮಾಡಿದ ಆರೋಪವೂ ಕೇಳಿಬಂದಿದೆ. ಆತ್ಮಹತ್ಯೆಗೆ ಮುನ್ನ ಪೃಥ್ವಿರಾಣಿ ಮೂರು ಬಾರಿ ಬದುಕು ಕೊನೆಗೊಳಿಸಲು ಯತ್ನಿಸಿದ್ದಾಳೆ ಎನ್ನಲಾಗಿದೆ.

ಘಟನೆಯ ದಿನ, ಪತ್ನಿ ಮಾತನಾಡುತ್ತಿಲ್ಲವೆಂದು ಜೈಮಾರುತಿ ಕುಟುಂಬಸ್ಥರಿಗೆ ಕರೆಮಾಡಿದಾಗ ಅವರು ಮನೆಗೆ ಬಂದು ನೋಡಿದಾಗ, ಪೃಥ್ವಿರಾಣಿ ಮಂಚದ ಮೇಲೆಯೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕುತ್ತಿಗೆಯಲ್ಲಿ ಕಪ್ಪು ಗುರುತು ಹಾಗೂ ಮೂಗಿನಿಂದ ರಕ್ತಸ್ರಾವ ಕಂಡು ಅನುಮಾನಗೊಂಡ ಕುಟುಂಬಸ್ಥರು ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದರು.

ಪ್ರಾಥಮಿಕ ತನಿಖೆಯಲ್ಲಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬಹಿರಂಗವಾಗಿದೆ. ಪತಿಯ ಕಿರುಕುಳ ಹಿನ್ನಲೆ ಆತ್ಮಹತ್ಯೆ ಎಸಗಿದ್ದಾಳೆ ಎಂಬ ಕುಟುಂಬಸ್ಥರ ಆರೋಪದ ಮೇರೆಗೆ ಶಿರಾ ಪೊಲೀಸರು ಜೈಮಾರುತಿಯನ್ನು ಬಂಧಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow