ರಸ್ತೆ ಮಧ್ಯೆ ಯಾವುದೇ ಧಾರ್ಮಿಕ ಕಟ್ಟಡ ಇರಬಾರದು: ಸುಪ್ರೀಂಕೋರ್ಟ್

ನವದೆಹಲಿ: ರಸ್ತೆ ಮಧ್ಯೆ ಯಾವುದೇ ಧಾರ್ಮಿಕ ಕಟ್ಟಡ ಇರಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮನೆಗಳನ್ನು ಕೆಡವಲು ಕೆಲವು ರಾಜ್ಯ ಸರ್ಕಾರಗಳು ‘ಬುಲ್ಡೋಜರ್ ನ್ಯಾಯ’ದ ಮೊರೆ ಹೋಗಿವೆ ಎಂಬ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ। ಬಿ.ಆರ್. ಗವಾಯಿ ಹಾಗೂ ನ್ಯಾ। ಕೆ.ವಿ. ವಿಶ್ವನಾಥನ್ ಅವರ ಪೀಠ ತೀರ್ಪು ಕಾದಿರಿಸಿದೆ.
ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ, ಜಲಮೂಲ ಅಥವಾ ರೈಲ್ವೆ ಹಳಿಯ ಬಳಿ ಯಾವುದೇ ರೀತಿಯ ಒತ್ತುವರಿ ಇರಬಾರದು. ಯಾವುದೇ ಧಾರ್ಮಿಕ ಸಂಸ್ಥೆ ಅದನ್ನು ಒತ್ತುವರಿ ಮಾಡಿಕೊಂಡಿದ್ದರೂ ತೆರವು ಮಾಡಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಭಾರತ ಜಾತ್ಯತೀತ ದೇಶ. ಹೀಗಾಗಿ ಇಂತಹ ಒತ್ತುವರಿಗಳನ್ನು ತೆರವುಗೊಳಿಸುವ ಸಂಬಂಧ ನೀಡುವ ಆದೇಶ ಯಾವುದೇ ಧರ್ಮ ಎಂದು ಪ್ರತ್ಯೇಕಿಸದೆ ಎಲ್ಲ ನಾಗರಿಕರಿಗೂ ಅನ್ವಯವಾಗುತ್ತದೆ. ರಸ್ತೆ ಮಧ್ಯೆ ಯಾವುದೇ ಧಾರ್ಮಿಕ ಕಟ್ಟಡ ಇರಬಾರದು. ಅದು ಗುರುದ್ವಾರ ಅಥವಾ ದರ್ಗಾ ಅಥವಾ ದೇಗುಲವೇ ಆಗಿರಬಹುದು. ಅದು ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಮಾಡಕೂಡದು. ಜನರ ಸುರಕ್ಷತೆಯೇ ಪರಮಶ್ರೇಷ್ಠ. ಹೀಗಾಗಿ ಈ ಒತ್ತುವರಿ ತೆರವು ಸಂಬಂಧ ಮಾರ್ಗಸೂಚಿ ಹೊರಡಿಸುವುದಾಗಿ ತಿಳಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






