ರಾಜ್ಯ ಸರ್ಕಾರದಿಂದ ಬಿಗ್ ಶಾಕ್: ನೂತನ ಕಾರು, ಬೈಕ್ ಖರೀದಿಸುವವರಿಗೆ ಸೆಸ್ ಹೆಚ್ಚಳ!
ಬೆಂಗಳೂರು:-ಹೊಸ ಕಾರು, ಬೈಕ್ ಖರೀದಿ ಮಾಡುವವರಿಗೆ ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಫೆಬ್ರುವರಿ 1 ರಿಂದ ಕರ್ನಾಟಕ ಸರ್ಕಾರವು ಹೊಸ ಕಾರು ಮತ್ತು ಬೈಕ್ ಖರೀದಿದಾರರಿಂದ ಹೆಚ್ಚುವರಿ ಸೆಸ್ ವಿಧಿಸಲು ನಿರ್ಧರಿಸಿದೆ. ಕಾರುಗಳಿಗೆ ₹1000 ಮತ್ತು ಬೈಕ್‌ಗಳಿಗೆ ₹500 ಹೆಚ್ಚುವರಿ ಸೆಸ್ ಪಾವತಿಸಬೇಕಾಗುತ್ತದೆ. ಈ ಹೆಚ್ಚುವರಿ ಸೆಸ್ ಮೋಟಾರು ಸಾರಿಗೆ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿಗಾಗಿ ಬಳಸಲಾಗುತ್ತದೆ. ಯೆಲ್ಲೋ ಬೋರ್ಡ್ ವಾಹನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎನ್ನಲಾಗಿದೆ.
ಹೊಸ ಕಾರು ಖರೀದಿ ಮಾಡುವವರು ಒಂದು ಸಾವಿರ ರೂಪಾಯಿ, ಹೊಸದಾಗಿ ಬೈಕ್ ಖರೀದಿ ಮಾಡುವವರು 500 ರೂಪಾಯಿಯನ್ನು ಹೆಚ್ಚುವರಿಯಾಗಿ ಸೆಸ್ ರೂಪದಲ್ಲಿ ಸಾರಿಗೆ ಇಲಾಖೆಗೆ ಪಾವತಿ ಮಾಡಬೇಕು.
ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಯ ಉದ್ದೇಶಕ್ಕಾಗಿ, ಸಾರಿಗೇತರ ವಾಹನಗಳ ನೋಂದಣಿ (ರಿಜಿಸ್ಟ್ರೇಷನ್) ಸಮಯದಲ್ಲಿ ಶುಲ್ಕ ದ್ವಿಚಕ್ರ ವಾಹನಗಳಿಗೆ 500 ರೂಪಾಯಿ, ಮೋಟಾರು ಕಾರುಗಳಿಗೆ 1 ಸಾವಿರ ರೂಪಾಯಿಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸಲಾಗುತ್ತದೆ. ಯೆಲ್ಲೋ ಬೋರ್ಡ್ ವಾಹನಗಳನ್ನು ಖರೀದಿ ಮಾಡುವವರ ಬಳಿ ಸೆಸ್ ಸಂಗ್ರಹ ಮಾಡುವಂತಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ತನ್ನ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿದೆ.
ಈಗಾಗಲೇ ಸಾರಿಗೆ ಇಲಾಖೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದೆ. ಇದೀಗ ಮತ್ತೆ ಹೊಸ ಕಾರು, ಬೈಕ್ ಖರೀದಿ ಮಾಡುವವರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ಏನೋ ಚಾಲಕರ ಅಭಿವೃದ್ಧಿ ಮಾಡುತ್ತೇವೆ ಎಂದು ಹೊಸ ಕಾರು, ಬೈಕ್ ಖರೀದಿ ಮಾಡುವವರಿಗೆ ರಿಜಿಸ್ಟ್ರೇಷನ್ ಚಾರ್ಜ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲು ಮುಂದಾಗಿದೆ. ಆದರೆ ಇದಕ್ಕೆ ಜನರು ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?